

Prajwal Revanna: ಆ.01ರಂದು ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಅಪರಾಧಿ ಎಂದು ತೀರ್ಪು ನೀಡಿದ ಕೋರ್ಟ್, ಇಂದಿನ ವಿಚಾರಣೆ ಬಳಿಕ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ.
ಪ್ರಜ್ವಲ್ ವಿರುದ್ಧ ದಾಖಲಾಗಿರುವ ನಾಲ್ಕು ಕೇಸ್ಗಳ ಪೈಕಿ, ಮೈಸೂರಿನ ಕೆ.ಆರ್. ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ಶುಕ್ರವಾರ ತೀರ್ಪು ಕೊಟ್ಟಿತು. ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನ ನ್ಯಾಯಧೀಶರು ಸಂತೋಷ್ ಗಜಾನನ ಭಟ್ ಅವರನ್ನೊಳಗೊಂಡ ಪೀಠವು, ಜುಲೈ 29ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಜೀವನಪರ್ಯಂತ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆಯನ್ನು ವಿಧಿಸಿರುವ ನ್ಯಾಯಾಲಯ, ಇದರೊಟ್ಟಿಗೆ ಐದು ಲಕ್ಷ ರೂ. ದಂಡವನ್ನು ಕಟ್ಟುವಂತೆ ಸೂಚಿಸಿದೆ. ಮತ್ತು ಸಂತ್ರಸ್ತೆಗೆ 11 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.