ಗುರುಪುರ: ನಿರಂತರ ಸುರಿಯುತ್ತಿರುವ ಧಾರಾಕಾರ ಗಾಳಿ-ಮಳೆಗೆ ಗುರುಪುರದ ಅಲ್ಲಲ್ಲಿ ಮರಗಳು ರಸ್ತೆಗಳಿಗೆ ಉರುಳಿ ಬಿದ್ದಿದ್ದು, ದಿನಪೂರ್ತಿ ವಿದ್ಯುತ್ ಕೈಕೊಟ್ಟಿದೆ. ಮರಗಳ ತೆರವುಗೊಳಿಸಿ ವಿದ್ಯುತ್ ಮರುಪೂರೈಕೆಗೆ ಮೆಸ್ಕಾಂ ಸಿಬ್ಬಂದಿ ಸಮರೋಪದಿಯಲ್ಲಿ ಕೆಲಸ ನಡೆಸಿದ್ದಾರೆ.
ಎರಡು ತಾಸುಗಳ ಕಾಲ ವಾಹನ ಸಂಚಾರ ಸ್ಥಗಿತ
ಗುರುಪುರ ಬಂಡಸಾಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಪಾಯಕಾರಿಯಾಗಿದ್ದ ಬೃಹತ್ ಮರವನ್ನು ತೆರವುಗೊಳಿಸಲಾಯಿತು. ಮಂಗಳೂರು – ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರದಲ್ಲಿ ಎರಡು ತಾಸು ವಾಹನ ಸಂಚಾರ ನಿಯಮಿತಗೊಳಿಸಲಾಯಿತು. ಸ್ಥಳೀಯ ಪಂಚಾಯಿತಿ ಸದಸ್ಯರು, ಸಂಘ – ಸಂಸ್ಥೆಗಳ ಯುವಕರು ಕಾರ್ಯಾಚರಣೆಗೆ ಸಹಕರಿಸಿದರು.
ಎನ್.ಎಚ್. ಮೋರಿ ಸ್ವಚ್ಛಗೊಳಿಸಿದ ಯುವಕರು
ಇದೇ ವೇಳೆ ಪಿಡಿಒ ಪಂಕಜಾ ಶೆಟ್ಟಿ, ಉಪ-ತಹಶೀಲ್ದಾರ್ ಶಿಪ್ರಸಾದ್, ವಿಎ ಶಿಲ್ಪಾ ಮತ್ತಿತರರ ಉಪಸ್ಥಿತಿಯಲ್ಲಿ ಸ್ಥಳೀಯ ಯುವಕರು ಕಸ-ಪ್ಲಾಸ್ಟಿಕ್ ಬಾಟಲಿಗಳಿಂದ ತುಂಬಿ ಹೋಗಿದ್ದ ಬಂಡಸಾಲೆಯ ಎನ್.ಎಚ್. ಮೋರಿ ಸ್ವಚ್ಛಗೊಳಿಸಿದರು.
ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ಪ್ರವಾಹಪೀಡಿತ ಗುರುಪುರ ಹಾಗೂ ಇತರೆಡೆ ತುರ್ತು ಭೇಟಿ ನೀಡಿ ಪರಿಹಾರ ಕಾರ್ಯಕ್ಕೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.