

ಪುತ್ತೂರು ಗ್ರಾಮಾಂತರ: ಚಿಕ್ಕಮುಡ್ನೂರು ಗ್ರಾಮದ ಬೀರಿಗ ಎಂಬಲ್ಲಿ ಶಿವಪ್ಪ ಗೌಡ ಎಂಬುವರ ಮನೆಯ ಹಿಂಬದಿಯ ದರೆ ಕುಸಿದು ದನದ ಹಟ್ಟಿಯ ಮೇಲೆ ಬಿದ್ದಿದೆ. ಸಿಮೆಂಟ್ ಶೀಟಿನ ಹಟ್ಟಿ ನೆಲಸಮಗೊಂಡಿದ್ದು, ಹಟ್ಟಿ ಮಣ್ಣಿನ ರಾಶಿಯೊಳಗಿದೆ. ಹಟ್ಟಿಯ ಬದಿಯಲ್ಲಿ ಕಟ್ಟಿ ಹಾಕಲಾಗಿದ್ದ ದನದ ಕರುವೊಂದು ಕೂದಳೆಲೆಯುವ ಅಂತರದಲ್ಲಿ ಸಾವಿನಿಂದ ಪಾರಾಗಿದೆ. ಕುಸಿದು ಬಿದ್ದ ಮಣ್ಣು ಮನೆಯ ಹಿಂಬದಿ ಭಾಗವನ್ನು ಆವರಿಸಿಕೊಂಡಿದೆ. ಶಿವಪ್ಪ ಗೌಡ ಅವರ ತೋಟಕ್ಕೆ ಚರಂಡಿ ನೀರು ನುಗ್ಗಿ ತೋಟ ಕೆರೆಯಂತಾಗಿದೆ.
ಒಳಮೊಗ್ರು ಗ್ರಾಪಂ ವ್ಯಾಪ್ತಿಯ ಕೈಕಾರ, ಬಿಜತ್ರೆ ಪ್ರದೇಶದ ಅಡಕೆ ತೋಟಗಳಿಗೆ ಮಳೆನೀರು ನುಗ್ಗಿ ಕೃಷಿ ನಾಶವಾಗಿದೆ. ಅಡಕೆ ತೋಟಗಳಲ್ಲಿನ ಅಡಕೆ, ಬಾಳೆ, ಕರಿಮೆಣಸು ಕೃಷಿಗಳು ನಾಶವಾಗಿವೆ.
ಒಳಮೊಗ್ರು ಗ್ರಾಮದ ಬೊಳ್ಳಾಡಿ ಕುಕ್ಕುಮುಗೇರು ಎಂಬಲ್ಲಿ ಎಚ್.ಟಿ.ವಿದ್ಯುತ್ ಲೈನ್ನ ಮೇಲೆ ಮರವೊಂದು ಉರುಳಿ ಬಿದ್ದು ಹಾನಿಯಾಗಿದೆ. ಘಟನೆ ಸಂಭವಿಸಿದ ಭಾಗದ ತೋಟದಲ್ಲಿ ಎರಡೂವರೆ ಅಡಿಯಷ್ಟು ಮಳೆನೀರು ತುಂಬಿಕೊಂಡಿದ್ದರೂ ಕುಂಬ್ರ ಮೆಸ್ಕಾಂ ಜೂನಿಯರ್ ಇಂಜಿನಿಯರ್ ರವೀಂದ್ರ ಅವರ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ ಪ್ರಶಾಂತ್, ತೀರ್ಥಾನಂದ, ಜಗದೀಶ್ ಅವರು ವಿದ್ಯುತ್ ಲೈನ್ ಮೇಲೆ ಬಿದ್ದಿದ್ದ ಮರ ತೆರವುಗೊಳಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.