

ಆಂಧ್ರಪ್ರದೇಶ: ತೆಲುಗು ಮತ್ತು ತಮಿಳು ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅಭಿನಯದ 'ದಿ ರೋಡ್' ಸಿನಿಮಾದ ಟ್ರೇಲರ್ ರಿಲೀಸ್ ದಿನಾಂಕ ಶೀಘ್ರವೇ ಬಿಡುಗಡೆಯಾಗಲು ಸಜ್ಜಾಗಿದ್ದು, ಇದೀಗ ಚಿತ್ರತಂಡ ಅಧಿಕೃತವಾಗಿ ಟ್ರೇಲರ್ ಡೇಟ್ ಘೋಷಿಸಿದೆ.
ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ 'ಲಿಯೋ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ತ್ರಿಶಾ, ಈ ಸಿನಿಮಾದ ಬಿಡುಗಡೆಗೂ ಮುನ್ನವೇ ತಾವು ಅಭಿನಯಿಸಿದ್ದ 'ದಿ ರೋಡ್' ಮೂಲಕ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸದ್ಯ ಮುಂಚೂಣಿಯಲ್ಲಿದ್ದಾರೆ. ಚಿತ್ರತಂಡ ಈ ಹಿಂದೆಯೇ ತಿಳಿಸಿದಂತೆ ಸಿನಿಮಾ ಇದೇ ಅಕ್ಟೋಬರ್ 6, ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಅರುಣ್ ವಸೀಗರನ್ ಬರೆದು ನಿರ್ದೇಶಿಸಿರುವ 'ದಿ ರೋಡ್'ನ ಥಿಯೇಟ್ರಿಕಲ್ ಟ್ರೈಲರ್ ಸೆಪ್ಟೆಂಬರ್ 21, 2023 ರಂದು ಯೂಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ. ಚಿತ್ರವು ಪ್ರಸ್ತುತ ತಮಿಳಿನಲ್ಲಿ ಮಾತ್ರ ತೆರೆ ಕಾಣಲಿದ್ದು, ಒಟಿಟಿಗೆ ಬಂದ ನಂತರ ಇತರ ಭಾಷೆಗಳಲ್ಲಿ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸದ್ಯ ಈ ಸಂಗತಿಯಿಂದ ಸಂತಸಪಟ್ಟ ತ್ರಿಶಾ ಅಭಿಮಾನಿಗಳು, ವಿಜಯ್ ಜತೆ ಅಭಿನಯಿಸಿರುವ ಪ್ಯಾನ್ ಇಂಡಿಯಾ 'ಲಿಯೋ' ಚಿತ್ರದ ಬಿಡುಗಡೆಗೆ ಬಹಳ ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).