

ಮಣಿಪುರ: ಮಂಗಳವಾರ (ಸೆ.19) ಇಂಫಾಲ್ ಕಣಿವೆಯ ಜಿಲ್ಲೆಗಳಲ್ಲಿ ಮೀರಾ ಪೈಬಿ, ಮೀಟೈ ಮಹಿಳೆಯರ ಸಮೂಹ ಮತ್ತು ಐದು ಸ್ಥಳೀಯ ಕ್ಲಬ್ಗಳು ಬಂದೂಕುಗಳನ್ನು ಮತ್ತು ಕೆಲ ಸಮವಸ್ತ್ರಗಳನ್ನು ಹೊಂದಿದ್ದಕ್ಕಾಗಿ ಬಂಧಿಸಲಾದ ಐವರು ಯುವಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಮಧ್ಯರಾತ್ರಿಯಿಂದ 48 ಗಂಟೆಗಳ ಬಂದ್ಗೆ ಕರೆ ನೀಡಿದೆ.
ಘಟನೆಯಿಂದ ಪರಿಸ್ಥಿತಿ ಉದ್ವೀಗ್ನಗೊಂಡಿದ್ದು, ನಗರದ ಮಾರುಕಟ್ಟೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ. ಸ್ಥಳೀಯರು ಯುವಕರನ್ನು ಬಿಡುಗಡೆಗೊಳಿಸುವಂತೆ ಪ್ರತಿಭಟನೆ ನಡೆಸುತ್ತಿರುವುದರಿಂದ ಮಂಗಳವಾರ ಮತ್ತು ಬುಧವಾರದಂದು ನಿಗದಿಯಾಗಿದ್ದ ಮಣಿಪುರದ ಪ್ರೌಢ ಶಿಕ್ಷಣ ಮಂಡಳಿಯ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಎಲ್ಲಾ ವಿಷಯಗಳ ಪೂರಕ ಪರೀಕ್ಷೆಗಳನ್ನು ಬಂದ್ನ ದೃಷ್ಟಿಯಿಂದ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂದ್ಗೆ ಕಾರಣವೇನು?: ಸೋಮವಾರ ಮೀರಾ ಪೈಬಿಸ್ ಅವರು ಇಂಫಾಲ್ ಪೂರ್ವ ಜಿಲ್ಲೆಯ ಖುರೈ ಮತ್ತು ಕೊಂಗ್ಬಾ, ಇಂಫಾಲ್ ಪಶ್ಚಿಮ ಜಿಲ್ಲೆಯ ಕಕ್ವಾ, ಬಿಷ್ಣುಪುರ್ ಜಿಲ್ಲೆಯ ನಂಬೋಲ್ ಮತ್ತು ತೌಬಲ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಯುವಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಗರದ ಪ್ರಮುಖ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಇದೀಗ ಬಿಡುಗಡೆಗೊಳಿಸದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, 48 ಗಂಟೆಗಳ ಬಂದ್ಗೆ ಕರೆ ನೀಡಲಾಗಿದೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಮತ್ತು ಮರೆಮಾಚುವ ಸಮವಸ್ತ್ರಗಳನ್ನು ಹೊಂದಿದ್ದ ಐದು ಜನರನ್ನು ಮಣಿಪುರ ಪೊಲೀಸರು ಶನಿವಾರ ಬಂಧಿಸಿದ್ದರು. ಐವರನ್ನು ಇದೀಗ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಮತ್ತು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಐವರನ್ನು ಬಿಡುಗಡೆ ಮಾಡಲು ಸರ್ಕಾರ ವಿಫಲವಾದರೆ ಆಂದೋಲನವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಯುಮ್ನಮ್ ಹೇಳಿದ್ದಾರೆ,(ಏಜೆನ್ಸೀಸ್).