

ಸತೀಶ್ ನೀನಾಸಂ, ವೈತರಣಿ ಎಂಬ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಗೊತ್ತಲ್ಲಾ? ಈಗ ಆ ಚಿತ್ರದ ಹೆಸರು ಬದಲಾಗಿದೆ. ಹಾಗಂತ ಖುದ್ದು ಸತೀಶ್ ಟ್ವೀಟ್ ಮಾಡಿದ್ದಾರೆ. ಹಾಗಾದರೆ, ಆ ಚಿತ್ರದ ಹೆಸರೇನು? ಅದಕ್ಕೊಂದು ಸುಳಿವು ಕೊಟ್ಟಿದ್ದಾರೆ.
ಸತೀಶ್ ಟ್ವಿಟರ್ ಮೂಲಕ ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಟನಲ್ವೊಂದರ ಫೋಟೋ ಅದು. ಆ ಟನಲ್ನಲ್ಲಿ ಹಲವು ಚಿತ್ರಗಳನ್ನು ಬಿಡಿಸಲಾಗಿದೆ. ತಮ್ಮ ಹೊಸ ಚಿತ್ರದ ಹೆಸರು, ಅದೇ ಗೋಡೆಗಳಲ್ಲಿ ಅಡಗಿದೆಯಂತೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನನ್ನ ಮುಂದಿನ ಸಿನಿಮಾದ ಶೀರ್ಷಿಕೆ ವೈತರಣಿ ಅಲ್ಲ. ನಮ್ಮ ಚಿತ್ರದ ಹೊಸ ಹೆಸರು ಲಂಡನ್ ನಗರದ ಲೀಕ್ ಸ್ಟ್ರೀಟ್ನ ಗೋಡೆಗಳಲ್ಲಿ ಅಡಗಿದೆ. ಹುಡುಕಿ, ನೋಡೋಣ ... ಎಂದು ಟ್ವೀಟಿಗರಿಗೆ ಅವರು ಸವಾಲು ಎಸೆದಿದ್ದಾರೆ.
ಇಷ್ಟಕ್ಕೂ ಟೈಟಲ್ ಬದಲಾಗುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಬರುವುದು ಸಹಜವೇ. ವೈತರಣಿ ಎನ್ನುವ ಹೆಸರು ಬಹಳಷ್ಟು ಜನರಿಗೆ ಕನೆಕ್ಟ್ ಆಗುವುದಿಲ್ಲ ಎಂಬ ಕಾರಣಕ್ಕೆ ಹೊಸ ಹೆಸರು ಇಡಲಾಗುತ್ತಿದೆಯಂತೆ. ನಾಳೆ ಸತೀಶ್ ಹುಟ್ಟುಹಬ್ಬವಿದ್ದು, ಅಂದು ಅಧಿಕೃತವಾಗಿ ಚಿತ್ರದ ಘೋಷಣೆಯಾಗಲಿದೆ. ಅದಕ್ಕೂ ಮುನ್ನ, ಟ್ವೀಟ್ ಮೂಲಕ ಎಲ್ಲರ ತಲೆಗೂ ಹುಳ ಬಿಟ್ಟಿದ್ದಾರೆ ಸತೀಶ್.
ಇನ್ನು ವೈತರಣಿ ಚಿತ್ರದ ಶೂಟಿಂಗ್ ಈ ವರ್ಷದ ಆರಂಭದಲ್ಲಿ ಪ್ರಾರಂಭವಾಗಿತ್ತು. ನಟಿ ಶರ್ಮಿಳಾ ಮಾಂಡ್ರೆ ನಿರ್ಮಿಸುತ್ತಿರುವ ಈ ಚಿತ್ರವನ್ನು, ಕಹಿ ಮತ್ತು ಅಳಿದುಳಿದವರು ಖ್ಯಾತಿಯ ಅರವಿಂದ್ ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆಯನ್ನು ಸಹ ಬರೆದಿದ್ದಾರೆ.
ಈಗಾಗಲೇ ಲಂಡನ್ನಲ್ಲಿ ಚಿತ್ರದ ಶೇ.30ರಷ್ಟು ಚಿತ್ರೀಕರಣವಾಗಿದೆ. ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆಯೇ, ಬಾಕಿ ಚಿತ್ರೀಕರಣ ಮುಂದುವರೆಯಲಿದೆ. ಅದರ ನಂತರ, ಶ್ರೀ ಸಾಯಿ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ಸತೀಶ್ ಅಭಿನಯಿಸುತ್ತಿದ್ದಾರಂತೆ. ಅದಲ್ಲದೆ, ರವಿಶಂಕರ್ ಎನ್ನುವವರು ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲೂ ಸತೀಶ್ ನಟಿಸುತ್ತಿದ್ದಾರೆ.