

ಬೆಂಗಳೂರು: ‘ಕಾಂತಾರ’ ಚಿತ್ರದ ನಂತರ ಈಗ ಇನ್ನೊಂದು ಕನ್ನಡ ಚಿತ್ರ ವಿವಾದಕ್ಕೀಡಾಗಿದೆ. ಶೂನ್ಯ ನಿರ್ದೇಶನದ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರವು ಇದೇ ಅ. 21ರಂದು ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ದೈವದ ಬಗ್ಗೆ ಹಗುರವಾದ ಪದಗಳ ಬಳಕೆ ಮಾಡುವುದರ ಜತೆಗೆ ಸಂಪ್ರದಾಯ ಬದ್ಧ ದೈವ ಆಚರಣೆಯನ್ನ ಚಿತ್ರದಲ್ಲಿ ಬೇಕಾಬಿಟ್ಟಿ ತೋರಿಸಲಾಗಿದೆ ಎಂದು ಆರೋಪಿಸಿ ಚಿತ್ರದ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡುವುದಕ್ಕೆ ತೀರ್ಮಾನಿಸಲಾಗಿದೆ.
ಅಂದಹಾಗೆ, ‘ಹೆಡ್ ಬುಷ್’ ಚಿತ್ರದಲ್ಲಿ ಬಳಸಿರುವ ಕೆಲವು ಪದಗಳು ಹಾಗೂ ಸನ್ನಿವೇಶಗಳನ್ನು ತೆಗೆಯಬೇಕು ಎಂದು ಒತ್ತಾಯ ಮಾಡುತ್ತಿರುವುವವರು ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯದವರು. ಈ ಸಂಬಂಧ ಇಂದು ಸಮುದಾಯದ ಮುಖಂಡರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಲಿದ್ದಾರೆ.
ಈ ಕುರಿತು ಮಾತನಾಡಿರುವ ಧರ್ಮರಾಯ ಸ್ವಾಮಿ ದೇವಸ್ಥಾನ ಹಾಗೂ ಕರಗ ಸಮಿತಿ ಅಧ್ಯಕ್ಷ ಸತೀಶ್, ‘ಚಿತ್ರದಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನ ಹಾಗೂ ತಿಗಳರ ಪೇಟೆ ಕರಗ ಅಂತ ತೋರಿಸಲಾಗುತ್ತದೆ. ಆದರೆ, ಅಲ್ಲಿ ತೋರಿಸಿರುವ ಕರಗ ಚುಂಚನಕಟ್ಟೆ ಕರಗದ್ದು. ಅಷ್ಟೇ ಅಲ್ಲ, ನಮ್ಮ ಸಮುದಾಯದ ಆಚಾರ ವಿಚಾರಗಳನ್ನ ಚಿತ್ರದಲ್ಲಿ ಗಾಳಿಗೆ ತುರಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಜಯರಾಜ್ ತಿಗಳ ಸಮುದಾಯದ ಜತೆ ಉತ್ತಮ ಒಡನಾಟ ಹೊಂದಿದ್ದರು. ಕರಗ ಮಹೋತ್ಸವಕ್ಕೆ ಸಹಕಾರ ಕೊಡುತ್ತಿದ್ದರು. ಬೇರೆ ಎಲ್ಲೋ ನಡೆದ ಕರಗವನ್ನು ಧರ್ಮರಾಯನಸ್ವಾಮಿ ಕರಗ ಅಂತ ತೋರಿಸಲಾಗಿದೆ. ಕರಗ ಮಹೋತ್ಸವ ವಿಶ್ವವಿಖ್ಯಾತ ಹಿನ್ನಲೆ ಹೊಂದಿದೆ. ಹಾಗಾಗಿ, ಸಿನಿಮಾದಲ್ಲಿ ಕರಗಕ್ಕೆ ಅವಮಾನ ಮಾಡಿರುವ ದೃಶ್ಯವನ್ನು ತೆಗೆಯುವುದರ ಜತೆಗೆ, ಕೂಡಲೇ ಚಿತ್ರತಂಡದವರು ಕ್ಷಮೆ ಕೇಳಬೇಕು’ ಎಂದು ಕರಗ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಆಗ್ರಹಿಸಿದ್ದಾರೆ.
ದೈವ, ಆಚಾರಗಳ ಬಗ್ಗೆ ಚಿತ್ರಗಳನ್ನು ಮಾಡುವಾಗ, ಬಹಳ ಜಾಗರೂಕತೆಯಿಂದ ಮಾಡಬೇಕು ಎಂದು ಸಲಹೆ ನೀಡಿರುವ ಅವರು, ‘ಯಾವುದೇ ಸಮುದಾಯದ ನಂಬಿಕೆ, ಆಚಾರ ವಿಚಾರಗಳಿಗೆ ಧಕ್ಕೆಯಾಗಬಾರದು. ಚಿತ್ರದಲ್ಲಿ ಬಂದಿರುವ ಕೆಲ ಪದಗಳು ಹಾಗೂ ದೃಶ್ಯ ನಮ್ಮ ಸಮುದಾಯಕ್ಕೆ ನೋವುಂಟು ಮಾಡಿದೆ. ನಾವು ಶ್ರದ್ದೆಯಿಂದ ಆಚರಣೆ ಮಾಡುವ ವಿಚಾರಗಳಿಗೆ ಧಕ್ಕೆಯಾಗಿದೆ. ಈ ಸಂಬಂಧ ನಾವು ಇಂದು ಮಧ್ಯಾಹ್ನ ಎರಡು ಗಂಟೆಗೆ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್ ಅವರನ್ನು ಭೇಟಿ ಮಾಡಿ ದೂರು ಕೊಡುತ್ತೇವೆ’ ಎಂದು ಹೇಳಿದ್ದಾರೆ.
ಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಪುಸ್ತಕವನ್ನಾಧರಿಸಿ ನಿರ್ಮಿಸಲಾಗಿರುವ ಹೆಡ್ ಬುಷ್ ಚಿತ್ರವು 70-80ರ ದಶಕದಲ್ಲಿ ಬೆಂಗಳೂರಿನ ಅಂಡರ್ವರ್ಲ್ಡ್ ಆಳಿದ ಜಯರಾಜ್ ಜೀವನವನ್ನಾಧರಿಸಿದೆ. ಈ ಚಿತ್ರದಲ್ಲಿ ಜಯರಾಜ್ ಆಗಿ ಧನಂಜಯ್ ಕಾಣಿಸಿಕೊಂಡಿದ್ದು, ಮಿಕ್ಕ ಪಾತ್ರಗಳಲ್ಲಿ ಯೋಗಿ, ರಘು ಮುಖರ್ಜಿ, ಶ್ರುತಿ ಹರಿಹರನ್, ವಸಿಷ್ಠ ಸಿಂಹ, ದೇವರಾಜ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಚರಣ್ರಾಜ್ ಅವರ ಸಂಗೀತವಿದೆ.