ಈಶ ಫೌಂಡೇಶನ್​ನಲ್ಲಿ 'ಕಾಂತಾರ' ಚಿತ್ರ ಪ್ರದರ್ಶನ; 3 ಸಾವಿರ ಮಂದಿ ವೀಕ್ಷಣೆ

Kantara - Isha Foundation
Published on

ಕೊಯಮತ್ತೂರು: ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರವು ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್​ ಅವರ ಈಶ ಫೌಂಡೇಶನ್​ನಲ್ಲಿ ಈ ಚಿತ್ರದ ಪ್ರದರ್ಶನಗೊಂಡಿದೆ.

ವಿಶೇಷವೆಂದರೆ, ಈ ಚಿತ್ರವನ್ನು ದೊಡ್ಡ ಸಭಾಂಗಣದಲ್ಲಿ ಸುಮಾರು ಮೂರು ಸಾವಿರ ಮಂದಿ ಕುಳಿತು ವೀಕ್ಷಿಸಿದ್ದಾರೆ. ಇಷ್ಟೊಂದು ಜನ ಏಕಕಾಲಕ್ಕೆ ಕುಳಿತು ನೋಡಿದ್ದು, ಕನ್ನಡದ ಮಟ್ಟಿಗೆ ಇದೊಂದು ಹೊಸ ದಾಖಲೆಯಾಗಿದೆ.

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಈಶ ಫೌಂಡೇಶನ್​, 'ಕನ್ನಡ ಚಿತ್ರ 'ಕಾಂತಾರ'ವು ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗುತ್ತಿದೆ. ಇತ್ತೀಚೆಗೆ ಹೊಂಬಾಳೆ ಫಿಲಂಸ್​ ಸಂಸ್ಥೆಯವರು ದೀಪಾವಳಿಯ ಶುಭ ಸಂದರ್ಭದಲ್ಲಿ ಈಶ ಯೋಗ ಸೆಂಟರ್​ನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದರು. ಈ ಚಿತ್ರದ ಪ್ರದರ್ಶನಕ್ಕೆ ಕಾರಣವಾದ ಹೊಂಬಾಳೆ ಫಿಲಂಸ್​ ಮತ್ತು ರಿಷಭ್​ ಶೆಟ್ಟಿ ಅವರಿಗೆ ಧನ್ಯವಾದಗಳು' ಎಂದು ಟ್ವೀಟ್​ ಮಾಡಲಾಗಿದೆ.

ಸೆ. 30ರಂದು 'ಕಾಂತಾರ' ಚಿತ್ರವು ಬಿಡುಗಡೆಯಾಗಿದ್ದು, ನಾಲ್ಕನೆಯ ವಾರದಲ್ಲೂ ಬಹುತೇಕ ಫುಲ್​ಹೌಸ್​ ಪ್ರದರ್ಶನಗಳನ್ನು ಕಾಣುತ್ತಿವೆ. ಮೊದಲು ಕನ್ನಡದಲ್ಲಷ್ಟೇ ಬಿಡುಗಡೆಯಾದ ಈ ಚಿತ್ರವು, ಈಗ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಚಿತ್ರದ ಕಲೆಕ್ಷನ್​ ಜೋರಾಗಿದ್ದು, ಇದುವರೆಗೂ 200 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ.

'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net