ಇನ್ನೊಂದು ಹೊಸ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಿವಣ್ಣ; ಮುಂದಿನ ವರ್ಷ ಪ್ರಾರಂಭ

Shivarajkumar
Published on

ಬೆಂಗಳೂರು: ಶಿವರಾಜಕುಮಾರ್​ ಅಭಿನಯದ ಚಿತ್ರಗಳ ಪಟ್ಟಿ ಬೆಳೆಯುತ್ತಲೇ ಇದೆ. ಈಗಾಗಲೇ ಅವರು ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈಗಾಗಲೇ 'ಕರಟಕ ದಮನಕ' ಮತ್ತು 'ಘೋಸ್ಟ್​' ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗಿದೆ. ಸದ್ಯದಲ್ಲೇ '45' ಶುರುವಾಗಲಿದೆ. ಆ ನಂತರ ಅಶ್ವತ್ಥಾಮ' ಚಿತ್ರ ಪ್ರಾರಂಭವಾಗಲಿದೆ. ಇದಲ್ಲದೆ ಶಿವಣ್ಣ ಇನ್ನೊಂದು ಹೊಸ ಪ್ಯಾನ್​ ಇಂಡಿಯಾ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಕಾರ್ತಿಕ್​ ಅದ್ವೈತ್ ಎಂಬ ಹೊಸ ನಿರ್ದೇಶಕರಿಗೆ​. ತೆಲುಗು ಮೂಲದ ಅದ್ವೈತ್​, ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ‘ಪಾಯುಮ್ ಒಲಿ ನೀ ಎನಕ್ಕು’ ಚಿತ್ರ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಧನಂಜಯ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈಗ ಸ್ಯಾಂಡಲ್​ವುಡ್​ ಅಂಗಳಕ್ಕೆ ಎಂಟ್ರಿ ಕೊಡ್ತಿರೋ ಅದ್ವೈತ್​ ಕಥೆ ಕೇಳಿ ಇಂಪ್ರೆಸ್ ಆಗಿರೋ ಶಿವಣ್ಣ ಅವರೊಂದಿಗೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ವಿಭಿನ್ನ ಲುಕ್​ ಮತ್ತು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರವು ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್​ ಆಗಿ, ಪ್ಯಾನ್​ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.

ಅದ್ವೈತ್​ ಬಾಲ್ಯದಿಂದಲೇ ಶಿವರಾಜಕುಮಾರ್ ಅವರ ಅಭಿಮಾನಿಯಂತೆ. ಈ ಕುರಿತು 'ವಿಜಯವಾಣಿ' ಜತೆಗೆ ಮಾತನಾಡಿದ ಅವರು, 'ಹಲವು ವರ್ಷಗಳ ಹಿಂದೆ ಶಿವರಾಜಕುಮಾರ್​ ಅವರ ಅಭಿನಯದ 'ಸಿಂಹದ ಮರಿ' ಚಿತ್ರ ತೆಲುಗಿಗೆ ಡಬ್​ ಆಗಿ ಬಿಡುಗಡೆಯಾಗಿತ್ತು. ಆ ಚಿತ್ರ ನೋಡಿದ ಮೇಲೆ, ನಾನು ಅವರ ಫ್ಯಾನ್​ ಆದೆ. ಆ ನಂತರ ಅವರ 'ಎಕೆ 47', 'ಜೋಗಿ' ಸೇರಿದಂತೆ ಸಾಕಷ್ಟು ಚಿತ್ರಗಳನ್ನು ನೋಡಿದ್ದೇನೆ. 'ಕಿಲ್ಲಿಂಗ್​ ವೀರಪ್ಪನ್​'ನಲ್ಲಿ ಅಸಿಸ್ಟೆಂಟ್​ ಆಗಿ ಕೆಲಸ ಮಾಡಿದ್ದೇನೆ. ಈಗ ಅವರ ಅಭಿನಯದಲ್ಲಿ ಚಿತ್ರ ನಿರ್ದೇಶಿಸುವ ಅವಕಾಶ ಸಿಕ್ಕಿದೆ' ಎನ್ನುತ್ತಾರೆ.

ಶಿವಣ್ಣ ಅಭಿನಯದ‌ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಹಾಗೂ ತೆಲುಗಿನಲ್ಲಿ 'ಆಫೀಸರ್', 'ಗುಡ್ ಲಕ್ ಸಖಿ' ಸಿನಿಮಾ ನಿರ್ಮಿಸಿರುವ ನಿರ್ಮಾಪಕ ಸುಧೀರ್ ಚಂದ್ರ ಪಡಿರಿ 'ಸುಧೀರ್ ಚಂದ್ರ ಫಿಲಂ ಕಂಪನಿ' ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಪ್ರೀಪ್ರೊಡಕ್ಷನ್​ ಹಂತದಲ್ಲಿರುವ ಈ ಚಿತ್ರದ ಚಿತ್ರೀಕರಣ ಮುಂದಿನ ವರ್ಷ ಪ್ರಾರಂಭವಾಗಲಿದೆ. ಚಿತ್ರದ ಟೈಟಲ್, ತಾರಾಬಳಗ, ತಾಂತ್ರಿಕ ವರ್ಗ ಮುಂತಾದ ವಿಷಯಗಳ ಮಾಹಿತಿಯನ್ನು ಮುಂಬರುವ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳೊದಾಗಿ ನಿರ್ದೇಶಕ ಕಾರ್ತಿಕ್ ಅದ್ವೈತ್ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net