

ಬೆಂಗಳೂರು: ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರವು ಕಳೆದ ವಾರವಷ್ಟೇ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಈ ಮಧ್ಯೆ, ಚಿತ್ರದಲ್ಲಿನ ಒಂದು ಪ್ರಮುಖ ದೃಶ್ಯವು ವಿವಾದಕ್ಕೀಡಾಗಿದ್ದು, ಸಾಕಷ್ಟು ಚರ್ಚೆಯಾಗುತ್ತಿದೆ.
ಚಿತ್ರದಲ್ಲೊಂದು ಕರಗದ ದೃಶ್ಯವಿದೆ. ಈ ಸಂದರ್ಭದಲ್ಲಿ ಜಯರಾಜ್ ಪಾತ್ರ ಮಾಡಿರುವ ಧನಂಜಯ್ ಮೇಲೆ ವೀರಗಾಸೆ ನೃತ್ಯ ಮಾಡುವವರ ಗೆಟಪ್ನಲ್ಲಿರುವ ರೌಡಿಗಳ ಗುಂಪೊಂದು ಅಟ್ಯಾಕ್ ಮಾಡುತ್ತದೆ. ಈ ದೃಶ್ಯವು ವಿವಾದಕ್ಕೆ ಕಾರಣವಾಗಿದೆ.
ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ದೃವಿಕ ಕಲೆಯಾದ ವೀರಗಾಸೆಗೆ ಅವಮಾನ ಮಾಡಲಾಗಿದೆ, ರೌಡಿಗಳಿಗೆ ವೀರಗಾಸೆ ವೇಷಭೂಷಣಗಳನ್ನು ತೊಡಿಸಿ ಅವರಿಗೆ ಮನಬಂದಂತೆ ಥಳಿಸುವಂತೆ ತೋರಿಸಲಾಗಿದೆ, ಅವರಿಗೆ ಶೂಕಾಲಿನಲ್ಲಿ ಒದೆಯುವಂತ ದೃಶ್ಯಗಳನ್ನು ತೋರಿಸಿ ವೀರಭದ್ರನಿಗೆ ಅವಮಾನ ಮಾಡಲಾಗಿದೆ. ವೀರಗಾಸೆ ವೇಷ-ಭೂಷಣ ತೊಟ್ಟವರು ಸಹ ಶೂ ಧರಿಸಿ ಫೈಟ್ ಮಾಡುವುದನ್ನು ತೋರಿಸಲಾಗಿದೆ. ವೀರಭದ್ರನ ಹಿನ್ನೆಲೆ ತಿಳಿಯದೆ ಇಂಥ ಕೆಲಸ ಮಾಡಲಾಗಿದ್ದು, ಸಂಸ್ಕೃತಿಯ ಅರಿವಿಲ್ಲದವರು ಇಂಥದ್ದೊಂದು ಅಪಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಬಹಿರಂಗವಾಗಿ ತಮ್ಮ ನೋವನ್ನು ತೋಡಿಕೊಂಡಿದ್ದು, ಸಾವಿರಾರು ವರ್ಷಗಳ ಇತಿಹಾಸವಿರುವ ವೀರಗಾಸೆ ಕಲೆಗೆ ಕಳಂಕ ತಂದ ಧನಂಜಯ್ಗೆ ವೀರಭದ್ರನೇ ತಕ್ಕ ಶಾಸ್ತಿ ಮಾಡುವಂತಾಗಲೀ ಎಂದು ತಮ್ಮ ಆಕ್ರೋಶವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ.