

ಬೆಂಗಳೂರು: ರಿಷಭ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರವು ಸದ್ದಿಲ್ಲದೆ ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಾರಂತ್ಯದ ಹೊತ್ತಿಗೆ ಚಿತ್ರವು 200 ಕೋಟಿ ರೂ. ಕ್ಲಬ್ ಸೇರುವುದು ಬಹುತೇಕ ಖಚಿತವಾಗಿದೆ. ಈ ಮೂಲಕ 'ಕೆಜಿಎಫ್ 2' ನಂತರ ಅತೀ ಹೆಚ್ಚು ಗಳಿಕೆ ಮಾಡಿದ ಎರಡನೆಯ ಕನ್ನಡ ಚಿತ್ರವಾಗಲಿದೆ.
'ಕಾಂತಾರ' ಚಿತ್ರವು ಸೆ. 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದಾಗಿ ತೆಲುಗು, ತಮಿಳು ಮತ್ತು ಮಲಯಾಳಂ ಮತ್ತು ಹಿಂದಿಗೆ ಡಬ್ ಮಾಡಲಾಯಿತು. ಚಿತ್ರದ ಕನ್ನಡ ಅವತರಣಿಕೆಯೊಂದೇ ಕಳೆದ 20 ಪ್ಲಸ್ ದಿನಗಳಲ್ಲಿ 110 ಪ್ಲಸ್ ಕೋಟಿ ರೂ.ಗಳನ್ನು ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ಮಿಕ್ಕಂತೆ ನಾಲ್ಕು ಭಾಷೆಗಳಿಂದ 70 ಕೋಟಿ ರೂ.ವರೆಗೂ ಗಳಿಕೆಯಾಗಿದ್ದು, ಒಟ್ಟಾರೆ ಚಿತ್ರವು ಇಷ್ಟು ದಿನಗಳಲ್ಲಿ ಅಂದಾಜು 180 ಕೋಟಿ ರೂ. ಗಳಿಕೆ ಮಾಡಿದೆ ಎಂಬ ಸುದ್ದಿ ಇದೆ. ದೀಪಾವಳಿ ರಜೆ ಇರುವುದರಿಂದ ಎಲ್ಲ ಕಡೆ ಕಲೆಕ್ಷನ್ ಜೋರಾಗಿದ್ದು, ಈ ವಾರಾಂತ್ಯದೊಳಗೆ ಚಿತ್ರವು 200 ಕೋಟಿ ರೂ. ಕ್ಲಬ್ ಸೇರುವ ಅಂದಾಜಿದೆ.
ಇಲ್ಲಿಯವರೆಗೂ ಆಗಿರುವ ಗಳಿಕೆಯ ಪ್ರಕಾರ, ಕರ್ನಾಟಕವೊಂದರಿಂದಲೇ 110 ಪ್ಲಸ್ ಕೋಟಿ ಬಂದಿದೆಯಂತೆ. ಆಂಧ್ರ ಮತ್ತು ತೆಲಂಗಾಣದಿಂದ 30 ಕೋಟಿ ರೂ, ಉತ್ತರ ಭಾರತದಿಂದ 30 ಕೋಟಿ ರೂ. ಅಲ್ಲದೆ ತಮಿಳು ನಾಡು ಮತ್ತು ಕೇರಳದಿಂದ 10 ಕೋಟಿ ರೂ.ವರೆಗೂ ಗಳಿಕೆ ಆಗಿದೆ ಎಂದು ಹೇಳಲಾಗುತ್ತಿದೆ. ಇದು ಭಾರತದ ಲೆಕ್ಕವಾದರೆ, ವಿದೇಶದಲ್ಲಿ 20 ಕೋಟಿಯವರೆಗೂ ಕಲೆಕ್ಷನ್ ಆಗಿರಬಹುದು ಎಂಬ ಮಾಹಿತಿ ಇದೆ. ಈ ಲೆಕ್ಕವನ್ನೂ ಸೇರಿಸಿದರೆ, ಚಿತ್ರ ಈಗಾಗಲೇ 200 ಕೋಟಿ ರೂ. ಕ್ಲಬ್ ಸೇರಿದಂತೆ ಆಗುತ್ತದೆ. ವಿದೇಶದ ಕಲೆಕ್ಷನ್ ಹೊರತುಪಡಿಸಿದರೆ, 180 ಕೋಟಿ ರೂ. ಆಗಲಿದ್ದು, ಈ ವಾರ ಮುಗಿಯುವಷ್ಟರಲ್ಲಿ ಚಿತ್ರವು 200 ಕೋಟಿ ಕ್ಲಬ್ ಸೇರಲಿದೆ.
'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.