

ಚೆನ್ನೈ: ತಮಿಳು ಚಿತ್ರರಂಗದಲ್ಲಿ ಮೂಡಿಬಂದಿರುವ ತಂಗಲನ್ ಸಿನಿಮಾ ನಟ ಚಿಯಾನ್ ವಿಕ್ರಮ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಪಾ. ರಂಜಿತ್ ನಿರ್ದೇಶನ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ತಂಗಲನ್ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ವೇಳೆ ನಟ ವಿಕ್ರಮ್ ಅವರು ತಮ್ಮ ಸಿನಿ ಜೀವನದ ಕೆಲ ಕಹಿ ಅನುಭವಗಳನ್ನು ಬಹಿರಂಗಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ವೃತ್ತಿ ಜೀವನದಲ್ಲಿ ಒಮ್ಮೆ ವಿಕ್ರಮ್ ಕಾಲಿನ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಈ ಬಗ್ಗೆ ಮಾತನಾಡಿರುವ ಅವರು, ನಾನು ಅಪಘಾತಕ್ಕೀಡಾಗಿದ್ದೆ. ಇದರಿಂದ ನನ್ನ ಕಾಲು ಮುರಿದಿತ್ತು. ಮತ್ತೆ ಎಂದಿಗೂ ನಡೆಯಲು ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದರು. ನಾನು ಸುಮಾರು 3 ವರ್ಷಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಸುಮಾರು 23 ಬಾರಿ ಸರ್ಜರಿಗು ಕೂಡ ಒಳಗಾಗಿದ್ದೇನೆ ಎಂದು ವಿಕ್ರಮ್ ತಿಳಿಸಿದ್ದಾರೆ.
ಒಂದೇ ವರ್ಷದಲ್ಲಿ ಹಲವು ಬಾರಿ ಸರ್ಜರಿಗೆ ಒಳಗಾದೆ. ಆದರೂ ಸಿನಿಮಾ ಮೇಲಿನ ನನ್ನ ಪ್ರೀತಿ ಮತ್ತು ನಂಬಿಕೆಯಿಂದ ನಾನು ಮತ್ತೆ ವಾಪಾಸಾದೆ ಎಂದು ವಿಕ್ರಮ್ ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಂಗಲನ್ ಸಿನಿಮಾ ನಿರ್ಮಾಣ ಸಂಸ್ಥೆ "ಹೋಮ್ ಸ್ಕ್ರೀನ್ ಎಂಟರ್ಟೈನ್ಮೆಂಟ್" ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಸಿನಿಮಾ ಮೇಲೆ ವಿಕ್ರಮ್ ಅವರಿಗೆ ಇರುವ ಪ್ರೀತಿಯ ಬಗ್ಗೆ ತಿಳಿದು ಎಲ್ಲರು ವಿಕ್ರಮ್ ಅವರನ್ನು ಕೊಂಡಾಡುತ್ತಿದ್ದಾರೆ.
ವಿಕ್ರಮ್-ರಿಷಭ್ ಭೇಟಿ
ಕನ್ನಡದ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರು ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ಅವರನ್ನು ಭೇಟಿ ಮಾಡಿದ್ದಾರೆ. ತಂಗಲನ್ ಚಿತ್ರದ ಪ್ರಚಾರಕ್ಕೆ ವಿಕ್ರಮ್ ಅವರು ನಿನ್ನೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಖಾಸಗಿ ಹೋಟೆಲ್ನಲ್ಲಿ ವಿಕ್ರಮ್ ಅವರನ್ನು ರಿಷಭ್ ಶೆಟ್ಟಿ ಭೇಟಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಕ್ರಮ್ ಭೇಟಿಗೆ ಸಂತಸ ವ್ಯಕ್ತಪಡಿಸಿ 24 ವರ್ಷಗಳ ಕಾಯುವಿಕೆ ಈಡೇರಿದೆ. ನನಗೆ ಸ್ಪೂರ್ತಿಯಾದ ವ್ಯಕ್ತಿಯನ್ನು ನಾನು ಭೇಟಿಯಾಗಿದ್ದೇನೆ. ನಾನು ಈ ಭೂಮಿ ಮೇಲಿನ ಅದೃಷ್ಟಶಾಲಿ ಎಂದು ರಿಷಭ್ ಶೆಟ್ಟಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್)