ನವದೆಹಲಿ: ತೂಕ ಕಾಯ್ದುಕೊಳ್ಳುವಲ್ಲಿ ವಿಫಲವಾಗಿ ಪ್ಯಾರಿಸ್ ಒಲಿಂಪಿಕ್ಸ್ನ ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆಯ ಫೈನಲ್ ಪಂದ್ಯದಿಂದ ಅನರ್ಹಗೊಂಡಿರುವ ಕುಸ್ತಿಪಟು ವಿನೇಶ್ ಪೋಗಟ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗಿದೆ.
ಇಡೀ ರಾತ್ರಿ ವರ್ಕೌಟ್ ಮಾಡಿದ ಪರಿಣಾಮ ಡಿಹೈಡ್ರೇಟ್ ಆಗಿ ಮೂರ್ಛೆ ಹೋದರು ಎಂದು ತಿಳಿದುಬಂದಿದೆ. ಸದ್ಯ ವಿನೇಶ್ ಅವರು ಆಸ್ಪತ್ರೆಯಲ್ಲಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ರಾತ್ರಿ ನಡೆಯಬೇಕಿದ್ದ ಮಹಿಳೆಯರ 50 ಕೆಜಿ ವಿಭಾಗದ ಫೈನಲ್‌ನಲ್ಲಿ ವಿನೇಶ್ ಫೋಗಟ್ ಅಮೆರಿಕದ ಸ್ಟಾರ್ ಕುಸ್ತಿಪಟು ಸಾರಾ ಹಿಲ್ಡರ್‌ಬ್ರಾಂಡ್ ಅವರನ್ನು ಎದುರಿಸಬೇಕಾಗಿತ್ತು. ಆದರೆ, ಮಂಗಳವಾರ ರಾತ್ರಿ ವಿನೇಶ್‌ಗೆ ತೂಕ ಹೆಚ್ಚಿರುವುದು ಅರಿವಾಯಿತು. ತೂಕ ಇಳಿಸಿಕೊಳ್ಳಲು ಇಡೀ ರಾತ್ರಿ ವರ್ಕೌಟ್ ಮಾಡಿದ್ದಾರೆ. ಸ್ಕಿಪ್ಪಿಂಗ್, ಸೈಕ್ಲಿಂಗ್ ಮತ್ತು ಜಾಗಿಂಗ್ ಮಾಡಿದ್ದಾರೆ. ರಾತ್ರಿಯಿಡೀ ವರ್ಕೌಟ್ ಮಾಡಿ ಸುಮಾರು 1 ಕೆಜಿಗಿಂತ ಹೆಚ್ಚು ತೂಕವನ್ನು ಕಳೆದುಕೊಂಡರು. ಆದಾಗ್ಯೂ, 100 ಗ್ರಾಂ ಅಧಿಕ ತೂಕದ ಕಾರಣ ಅವರನ್ನು ಅನರ್ಹಗೊಳಿಸಲಾಗಿದೆ. ತುಂಬಾ ವರ್ಕೌಟ್ ಮಾಡಿದ್ದರಿಂದ ಮೂರ್ಛೆ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಆರೋಗ್ಯ ಸ್ಥಿರವಾಗಿದೆ.
ಇಂದು ಬೆಳಿಗ್ಗೆ ವಿನೇಶ್ ಅವರ ದೇಹದ ತೂಕವನ್ನು ಪರೀಕ್ಷಿಸುವ ಸಂದರ್ಭದಲ್ಲಿ ನಿಗದಿತ ತೂಕಕ್ಕಿಂತ 150 ಗ್ರಾಂ ತೂಕ ಹೆಚ್ಚಿರುವುದು ಕಂಡುಬಂದಿದೆ. ಈ ಕಾರಣದಿಂದ ಒಲಿಂಪಿಕ್ಸ್ನಿಂದ ವಿನೇಶ್ ಅನರ್ಹಗೊಂಡಿದ್ದಾರೆ. ಒಲಿಂಪಿಕ್ಸ್ ನಿಯಮದ ಪ್ರಕಾರ ತೂಕವನ್ನು ನಿರ್ವಹಿಸಲು ಸಾಧ್ಯವಾಗದ ಯಾವುದೇ ಕುಸ್ತಿಪಟುವನ್ನು ಸ್ಪರ್ಧೆಯಿಂದಲೇ ಅನರ್ಹಗೊಳಿಸಲಾಗುತ್ತದೆ ಮತ್ತು ಅವರಿಗೆ ಕೊನೆಯ ಸ್ಥಾನ ನೀಡಲಾಗುತ್ತದೆ. ಹೀಗಾಗಿ ವಿನೇಶ್ ಪೋಗಟ್ ಅವರು ಅನರ್ಹಗೊಂಡಿದ್ದು, ಬೆಳ್ಳಿ ಪದಕವೂ ಕೂಡ ಸಿಗುವುದಿಲ್ಲ.
ಈ ಬಗ್ಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಸಿ) ಹೇಳಿಕೆ ನೀಡಿದ್ದು, ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಕುಸ್ತಿಪಟು ವಿನೇಶ್ ಪೋಗಟ್ ಅವರನ್ನು ಅನರ್ಹಗೊಳಿಸಿರುವ ಸುದ್ದಿಯನ್ನು ವಿಷಾದದಿಂದ ಹಂಚಿಕೊಳ್ಳುತ್ತೇವೆ. ರಾತ್ರಿಯಿಡೀ ಭಾರತ ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಇಂದು ಬೆಳಿಗ್ಗೆ 50 ಕೆಜಿಗಿಂತ ಕೆಲವು ಗ್ರಾಂಗಳಷ್ಟು ತೂಕವನ್ನು ವಿನೇಶ್ ಹೆಚ್ಚಿಗೆ ಹೊಂದಿದ್ದರು. ಸದ್ಯ ಈ ಬಗ್ಗೆ ಹೆಚ್ಚಿಗೆ ಏನು ಹೇಳಲಾಗುವುದಿಲ್ಲ. ಭಾರತ ತಂಡವು ವಿನೇಶ್ ಅವರ ಖಾಸಗಿತನವನ್ನು ಗೌರವಿಸುವಂತೆ ವಿನಂತಿಸುತ್ತದೆ. ಸದ್ಯ ಕೈಯಲ್ಲಿರುವ ಇತರೆ ಸ್ಪರ್ಧೆಗಳ ಮೇಲೆ ಕೇಂದ್ರೀಕರಿಸಲು ಬಯಸುತ್ತದೆ ಎಂದು ಐಒಸಿ ಹೇಳಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ಅಮೆರಿಕದ ಸಾರಾ ಹಿಲ್ಡರ್‌ಬ್ರಾಂಡ್ ವಿರುದ್ಧ ಫೈನಲ್‌ನಲ್ಲಿ ಸೆಣಸಾಡಬೇಕಿತ್ತು. ಆದರೆ, ಅನರ್ಹಗೊಂಡಿರುವುದು ಭಾರತೀಯರಿಗೆ ಆಘಾತ ಉಂಟುಮಾಡಿದೆ. ಹರಿಯಾಣದ 29 ವರ್ಷದ ವಿನೇಶ್ ಪೋಗಟ್ ಮಂಗಳವಾರ (ಆ.6) ರಾತ್ರಿ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನಿಲಿಸ್ ಗುಜ್ಮನ್ ಲೋಪೆಜ್ ವಿರುದ್ಧ 5-0 ಅಂಕಗಳಿಂದ ಸುಲಭ ಗೆಲುವು ದಾಖಲಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದರು. ಈ ಮುನ್ನ 2016ರ ರಿಯೋ ಒಲಿಂಪಿಕ್ಸ್ನಲ್ಲಿ 48 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಣಕ್ಕಿಳಿದ ವಿನೇಶ್, ಕ್ವಾರ್ಟರ್ಫೈನಲ್ನಲ್ಲಿ ಗಾಯಕ್ಕೆ ತುತ್ತಾಗಿ ಪಂದ್ಯವನ್ನು ಅರ್ಧಕ್ಕೆ ತ್ಯಜಿಸಿದ್ದರು. 2021ರ ಟೋಕಿಯೊ ಗೇಮ್ಸ್ನಲ್ಲಿ 53 ಕೆಜಿ ವಿಭಾಗದಲ್ಲಿ ಆಡಿದಾಗಲೂ ಎಂಟರ ಘಟ್ಟದಲ್ಲಿ ವಿನೇಶ್ ಪದಕದ ಕಸನು ಭಗ್ನಗೊಂಡಿತು. (ಏಜೆನ್ಸೀಸ್)
ತೂಕ ಕಾಯ್ದುಕೊಳ್ಳುವಲ್ಲಿ ವಿಫಲ: ವಿನೇಶ್ ಪೋಗಟ್ ಅನರ್ಹ, ಚಿನ್ನದ ಪದಕದ ಕನಸು ಭಗ್ನ
ಪ್ರತಿನಿತ್ಯವೂ ಪುದೀನಾ ಟೀ ಸೇವಿಸುವುದರಿಂದ ಇಷ್ಟೊಂದು ಲಾಭವಿದೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ…