ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ದಿನಕ್ಕೊಂದು ಟೀ ಕುಡಿಯದಿದ್ದರೂ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.
ಇಂದು ನಾನಾ ಬಗೆಯ ಚಹಾಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಆದರೆ, ಅವರವರ ರುಚಿ ಮತ್ತು ಆರೋಗ್ಯಕ್ಕೆ ತಕ್ಕಂತೆ ಗ್ರೀನ್ ಟೀ, ಬ್ಲಾಕ್ ಟೀ, ಲೆಮನ್ ಟೀ, ಹಾಲಿನ ಟೀ ಕುಡಿಯುತ್ತಾರೆ. ಹೆಚ್ಚಿನವರು ಹಾಲಿನ ಚಹಾವನ್ನು ಇಷ್ಟಪಡುತ್ತಾರೆ. ನೀವು ಪುದಿನಾ ಚಹಾ ಬಗ್ಗೆ ಕೇಳಿರಬಹುದು. ಕೇಳಿಲ್ಲ ಅಂದರೆ, ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ಆಹಾರದ ಸುವಾಸನೆಗಾಗಿ ಮಾತ್ರ ಪುದೀನವನ್ನು ಸೇರಿಸುತ್ತಾರೆ ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ, ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು, ಇದೊಂದು ಉತ್ತಮ ಗಿಡಮೂಲಿಕೆಯಾಗಿದೆ. ಇದರಲ್ಲಿ ರಂಜಕ, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್‌ಗಳು, ಕಬ್ಬಿಣ ಮತ್ತು ವಿಟಮಿನ್ ಎ ನಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಪುದೀನಾವನ್ನು ಸೇವಿಸುವುದರಿಂದ ಅಸ್ತಮಾ ರೋಗಿಗಳ ಉಸಿರಾಟದ ತೊಂದರೆಯನ್ನು ಕಡಿಮೆ ಮಾಡಬಹುದು.
ರಾತ್ರಿಯಿಡೀ ಒಂದು ಕಪ್ ನೀರಿನಲ್ಲಿ ಕೆಲವು ಪುದೀನ ಎಲೆಗಳನ್ನು ಹಾಕಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ, ನಿಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯುತ್ತೀರಿ. ಅಲ್ಲದೆ, ಟೀ ರೂಪದಲ್ಲೂ ಇದನ್ನು ಸೇವಿಸಬಹುದು. ಅಂದರೆ, ನೀರಿನಲ್ಲಿ ಪುದೀನಾ ಎಲೆಗಳನ್ನು ಕುದಿಸಿ, ಆರಿಸಿ ಸವಿಯಬಹುದು. ಈ ಎಲೆಯು ದೇಹದಲ್ಲಿರುವ ಹಲವಾರು ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಇದನ್ನು ಪ್ರತಿನಿತ್ಯ ಆಹಾರದಲ್ಲಿ ಸೇರಿಸಿಕೊಂಡರೆ ಹೊಟ್ಟೆಯ ಆಮ್ಲ, ಅಜೀರ್ಣ ಹಾಗೂ ಗ್ಯಾಸ್ನಂತಹ ಸಮಸ್ಯೆಗಳು ದೂರವಾಗುತ್ತವೆ.
ಕಿವಿನೋವು, ಉರಿಯೂತ, ಸೈನಸ್ ಮತ್ತು ಸಂಧಿವಾತಕ್ಕೆ ಪುದೀನಾದಿಂದ ಔಷಧಗಳನ್ನು ತಯಾರಿಸಲಾಗುತ್ತದೆ. ಬೇಸಿಗೆಯಲ್ಲಿ ದೇಹವು ಅತಿಯಾಗಿ ಬಿಸಿಯಾಗಿರುವಾಗ ಪುದೀನಾವನ್ನು ಆಹಾರದಲ್ಲಿ ಸೇರಿಸುವುದರಿಂದ ದೇಹವನ್ನು ಶಾಖದ ಹೊಡೆತದಿಂದ ರಕ್ಷಿಸುತ್ತದೆ.
ಇನ್ನು ಪ್ರತಿದಿನ ಪುದೀನಾ ಟೀ ಕುಡಿದರೆ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಪುದೀನಾ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಬಾಯಿಯ ದುರ್ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಪೂರ್ಣ ಸಮಯ ಕೆಲಸ ಮಾಡುವ ಜನರು ಹೆಚ್ಚು ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಹೀಗಾಗಿ ಪ್ರತಿದಿನ ಪುದೀನಾ ಚಹಾ ಕುಡಿಯುವುದು ಒಳ್ಳೆಯದು. ಇದರಿಂದ ದೈಹಿಕ ಒತ್ತಡವಿಲ್ಲದೆ ಮನಸ್ಸು ಸ್ಥಿರವಾಗಿರುತ್ತದೆ.
ಇನ್ನು ನೆಗಡಿ ಮತ್ತು ಎದೆ ಬಿಗಿತ ಇದ್ದಾಗ ಪುದೀನಾ ಟೀ ಕುಡಿಯಿರಿ. ಪುದೀನಾ ಟೀ ವಾಯುಮಾರ್ಗಗಳನ್ನು ತೆರೆಯುತ್ತದೆ ಮತ್ತು ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ. ಪುದೀನಾದಲ್ಲಿರುವ ಮೆಂಥಾಲ್ ವಾಯು, ಅಜೀರ್ಣ ಮತ್ತು ಗ್ಯಾಸ್ ನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಊಟದ ನಂತರ ಒಂದು ಕಪ್ ಪುದೀನಾ ಚಹಾವನ್ನು ಕುಡಿಯುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. (ಏಜೆನ್ಸೀಸ್)
ತೂಕ ಕಾಯ್ದುಕೊಳ್ಳುವಲ್ಲಿ ವಿಫಲ: ವಿನೇಶ್ ಪೋಗಟ್ ಅನರ್ಹ, ಚಿನ್ನದ ಪದಕದ ಕನಸು ಭಗ್ನ
ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ 1 ಲಕ್ಷ ರೂ. ಗೆಲ್ಲುವ ಅವಕಾಶ: ಬಂಪರ್ ಆಫರ್ ಘೋಷಿಸಿದ ರಿಷಭ್ ಪಂತ್