

ಬೆಂಗಳೂರು: ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ ಅಭಿನಯದ ತೋತಾಪುರಿ-2 ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮೊದಲ ಭಾಗದ ಅಂತ್ಯದಲ್ಲಿ ಕಾಣಿಸಿಕೊಂಡು ಒಂದು ಸ್ಪೆಷಲ್ ಲುಕ್ ನೀಡಿದ್ದ ಧನಂಜಯ್ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಹೊರಹೊಮ್ಮಿದ್ದಾರೆ.
ಜಗತ್ತೇ ಒಂದು ಮನೆ, ನಾವೆಲ್ಲ ಒಂದೇ ಸೂರಿನಡಿ ಬದುಕುತ್ತಿರುವವರು ಎನ್ನುವ ಭಾವೈಕ್ಯತೆಯ ಸಂದೇಶ ಸಾರುವ ತೋತಾಪುರಿ ಚಿತ್ರವು ಪ್ರೇಕ್ಷಕರಿಂದ, ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಚಿತ್ರದ ಕೊನೆಯಲ್ಲಿ ಎರಡನೇ ಭಾಗವನ್ನು ಮಾಡುತ್ತಿರುವುದಾಗಿ ನಿರ್ದೇಶಕ ವಿಜಯ್ಪ್ರಸಾದ್ ತಿಳಿಸಿದ್ದರು.
ಗುರುಫೂರ್ಣಿಮೆಯ ಅಂಗವಾಗಿ ಚಿತ್ರತಂಡ ತೋತಾಪುರಿ-2 ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಪೋಸ್ಟರ್ನಲ್ಲಿ ನಾಯಕರಾದ ಜಗ್ಗೇಶ್ ಹಾಗೂ ಧನಂಜಯ್ ಅವರ ಪಾತ್ರದ ಕುರಿತ ಝಲಕ್ ನೀಡಲಾಗಿದೆ.
ಈ ಕುರಿತು ಮಾತನಾಡಿರುವ ನಿರ್ಮಾಪಕ ಕೆ.ಎ. ಸುರೇಶ್ ತೋತಾಪುರಿ ಪಾರ್ಟ್-2 ಮೊದಲಿಗಿಂತ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಡಾಲಿ ಅಭಿಮಾನಿಗಳಿಗಂತೂ ಫುಲ್ ಮೀಲ್ಸ್ ಅನ್ನಬಹುದು. ಅಲ್ಲದೆ ಪೋಸ್ಟ್ ಪ್ರೊಡಕ್ಷನ್ ಹಂತದ ಸಣ್ಣಪುಟ್ಟ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಫಸ್ಟ್ ಕಾಪಿ ಹೊರಬರಲಿದೆ.
ನಮ್ಮ ನಿರೀಕ್ಷೆಯಂತೆಯೇ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವ ಮನರಂಜನಾತ್ಮಕ ಕಂಟೆಂಟ್ ಚಿತ್ರದಲ್ಲಿದೆ. ಥೇಟರಿಗೆ ಬರುವ ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ಜೊತೆ ಕಾಮಿಡಿ ಪಂಚಿಂಗ್ ನೀಡಲಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ ಅಲ್ಲದೆ ಜಗ್ಗೇಶ್, ದತ್ತಣ್ಣ, ಸುಮನ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿಯಲಿವೆ ಎಂದು ಚಿತ್ರದ ನಿರ್ಮಾಪಕ ಕೆ.ಎ.ಸುರೇಶ್ ತಿಳಿಸಿದ್ದಾರೆ.