

ಬೆಂಗಳೂರು: 'ಓಂ' ಈ ಪದ ಕೇಳಿದೊಡೆನೆ ಚಿತ್ರಪ್ರೇಮಿಗಳಿಗೆ ಮೊದಲು ನೆನಪಾಗೋದು ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಸಿನಿಮಾ. ಯಾಕಂದ್ರೆ, 90ರ ದಶಕದಲ್ಲಿ ಮೂಡಿಬಂದ ಈ ಸಿನಿಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡಿತು. ಡಾ. ರಾಜ್ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್, ಶಂಕರ್ನಾಗ್, ಅನಂತ್ನಾಗ್ ಅವರ ಪ್ರೇಮ ಸಂಬಂಧ, ಕುಟುಂಬ ಆಧರಿತ ಚಿತ್ರಗಳ ಮಧ್ಯೆ ರೌಡಿಸಂ ಕಥೆಯುಳ್ಳ ಮಾಸ್ ಸಿನಿಮಾವೊಂದು ತೆರೆಗೆ ಅಪ್ಪಳಿಸುವ ಮುಖೇನ ಭಾರತೀಯ ಚಿತ್ರರಂಗದ ಲೆಕ್ಕಾಚಾರಗಳನ್ನು ತೆಲೆಕೆಳಗೆ ಮಾಡಿತು.
ಇದನ್ನೂ ಓದಿ: 17 ದಿನಗಳ ನಂತರ ಮತ್ತೊಮ್ಮೆ ಅಯೋಧ್ಯೆಗೆ ತೆರಳಿದ ಅಮಿತಾಭ್
ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದಲ್ಲಿ ತಯಾರಾದ 'ಓಂ' ಇಂದಿಗೂ ಸಿನಿಪ್ರೇಕ್ಷಕರ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ ಅಂದರೆ ಅದರ ಹಿಂದಿರುವ ಕಸರತ್ತನ್ನು ವಿವರಿಸುವುದು ನಿಜಕ್ಕೂ ಕಷ್ಟಸಾಧ್ಯವೇ ಬಿಡಿ. ಚಿತ್ರದಲ್ಲಿ ರೌಡಿಗಳಾಗಿ ಪಾತ್ರ ನಿಭಾಯಿಸಿರುವವರು ಅಸಲಿ ರೌಡಿಗಳೇ ಎಂಬುದು ಈಗಲೂ ಒಂದಷ್ಟು ಜನರಿಗೆ ತಿಳಿಯದ ಸಂಗತಿ. ಈ ಮೂಲಕ ಹೊಸ ಹೊಸ ಪ್ರಯತ್ನಗಳನ್ನು ಮಾಡಿ, ಚಿತ್ರರಸಿಕರಿಂದ ಸೈಎನಿಸಿಕೊಂಡ ಉಪ್ಪೇಂದ್ರ ಹಾಗೂ ಶಿವರಾಜ್ಕುಮಾರ್ ಅಂದಿನ ಸಮಯಕ್ಕೆ ಸ್ಯಾಂಡಲ್ವುಡ್ನಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದರು.
ಇಂದಿಗೂ ಕೂಡ ಈ ಚಿತ್ರವನ್ನು ಕನ್ನಡದ ಯಾವುದಾದರೂ ಸಿನಿಮಾ ಹಿಂದಿಕ್ಕಿದೆಯೇ ಎಂಬ ಪ್ರಶ್ನೆಗೆ ಹುಡುಕಿದರು ಉತ್ತರ ಸಿಗುವುದೇ ಕಷ್ಟವೇ. 1995ರಲ್ಲಿ 'ಓಂ' ಗಳಿಸಿದ್ದ ಬಾಕ್ಸ್ ಆಫೀಸ್ ದಾಖಲೆ, ಚಿತ್ರವನ್ನು ಜನರಿಗೆ ತೋರಿಸಿದ್ದ ರೀತಿ, ಪಾತ್ರವರ್ಗ, ಬಿಜಿಎಂ, ಸಂಭಾಷಣೆ ಇವೆಲ್ಲವನ್ನೂ ಇಂದಿನ ಯಾವ ಚಿತ್ರವೂ ಸಹ ಹೊಂದಿಸಲು ಸಾಧ್ಯವಿಲ್ಲ.
ಈಗಲೂ ಕೂಡ ಶಿವರಾಜ್ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಒಂದು ಅಥವಾ ಎರಡು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರೀ-ರಿಲೀಸ್ ಆಗುತ್ತದೆ. ಅಷ್ಟರ ಮಟ್ಟಿಗೆ ಈ ಚಿತ್ರದ ಕ್ರೇಜ್ ಇದೆ.
ಚಿತ್ರದ ಕ್ಲೈಮ್ಯಾಕ್ಸ್ ಸೀನ್ನಲ್ಲಿ ಶಿವರಾಜ್ಕುಮಾರ್ ಮತ್ತು ಪ್ರೇಮ ಅವರ ಕೈನಲ್ಲಿರುವ ಇಬ್ಬರು ಮಕ್ಕಳು ಕನ್ನಡ ಚಿತ್ರರಂಗದ ಸ್ಟಾರ್ ನಟನ ಪುತ್ರರು ಎಂಬುದು ಅನೇಕರಿಗೆ ತಿಳಿಯದ ಸಂಗತಿ. ಫೋಟೋದಲ್ಲಿ ಕಾಣಿಸುವ ಪುಟಾಣಿಗಳು ಇಂದು ಸ್ಯಾಂಡಲ್ವುಡ್ನಲ್ಲಿ ನಟರಾಗಿ ಗುರುತಿಸಿಕೊಂಡಿದ್ದು, ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಆ ಇಬ್ಬರು ಮಕ್ಕಳು ಬೇರಾರು ಅಲ್ಲ, ವರನಟ ಡಾ. ರಾಜ್ಕುಮಾರ್ ಅವರ ಮೊಮ್ಮಕ್ಕಳು ಅಂದರೆ ರಾಘವೇಂದ್ರ ರಾಜ್ಕುಮಾರ್ ಅವರ ಪ್ರೀತಿಯ ಪುತ್ರರಾದ ವಿನಯ್ ಹಾಗೂ ಯುವ ರಾಜ್ಕುಮಾರ್. ಈ ವಿಷಯವನ್ನು ಸ್ವತಃ ವಿನಯ್ ಅವರೇ ಇತ್ತೀಚಿಗೆ ನಡೆದ ಖಾಸಗಿ ಚಾನೆಲ್ನ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.