

ಬೆಂಗಳೂರು: ಇದೊಂದು 'ಬೆಡ್ರೂಮ್' ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಸದ್ದು ಮಾಡುತ್ತಿದೆ, ಸುದ್ದಿಯೂ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಜಾಗತಿಕವಾಗಿ ಗಮನ ಸೆಳೆಯುತ್ತಿರುವ ಈ ಬೆಡ್ರೂಮ್ ಬೆಂಗಳೂರಿನಲ್ಲಿ ಇರುವುದಾದರೂ ಎಲ್ಲಿ? ಜನರು ಇದರ ಬಗ್ಗೆ ಮಾತನಾಡುತ್ತಿರುವುದಾದರೂ ಯಾಕೆ? ಎಂದು ಅಚ್ಚರಿ ಆಗಿದ್ದರೆ, ಅದಕ್ಕಿಲ್ಲಿದೆ ಉತ್ತರ.
ಸೋಷಿಯಲ್ ಮೀಡಿಯಾ ರೆಡ್ಡಿಟ್ನಲ್ಲಿ ಸೈಯಾ ಎಂಬ ಯೂಸರ್ ಈ ಬೆಡ್ರೂಮ್ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದು, ಅದೀಗ ವೈರಲ್ ಆಗಲಾರಂಭಿಸಿದೆ. “A room for a bed is a bedroom..." ಎಂಬ ಕ್ಯಾಪ್ಷನ್ನೊಂದಿಗೆ ಈ ಬೆಡ್ರೂಮ್ ಫೋಟೋ ಹಾಗೂ ಮಾಹಿತಿ ರೆಡ್ಡಿಟ್ನಲ್ಲಿ ಹಂಚಿಕೊಳ್ಳಲಾಗಿದೆ.
ಬೆಂಗಳೂರಿನ ಮಹದೇವಪುರದಲ್ಲಿ ಇರುವ ಈ ಬೆಡ್ರೂಮ್ ಸುದ್ದಿ ಆಗುತ್ತಿರುವುದು ಇಲ್ಲಿನ ಸ್ಥಳಾವಕಾಶ ಮತ್ತು ಬಾಡಿಗೆ ವಿಚಾರಕ್ಕೆ. ಬಾಡಿಗೆಗೆ ಸಂಬಂಧಿಸಿದ ವೆಬ್ಸೈಟ್ವೊಂದರಲ್ಲಿ ಫ್ಲ್ಯಾಟ್ ವಿಚಾರ ನಮೂದಾಗಿದೆ.
50 ಸಾವಿರ ರೂ. ಅಡ್ವಾನ್ಸ್ ಮತ್ತು 12 ಸಾವಿರ ರೂ. ಬಾಡಿಗೆ ಎಂದು ಉಲ್ಲೇಖಿಸಲಾಗಿರುವ ಒಂದು ರೂಮ್, ಕಿಚನ್ ಮತ್ತು ಬಾತ್ರೂಮ್ನ ಈ ಫ್ಲ್ಯಾಟ್ನಲ್ಲಿನ ರೂಮ್ ಬಗ್ಗೆಯೇ ರೆಡ್ಡಿಟ್ ಯೂಸರ್ಗೆ ಅಚ್ಚರಿ ಅನಿಸಿದ್ದು. ಈ ರೂಮ್ನಲ್ಲಿ ಒಂದು ಬೆಡ್ ಇಡುವಷ್ಟು ಜಾಗ ಬಿಟ್ಟರೆ ಬೇರೆ ಜಾಗ ಇಲ್ಲ. ಒಂದು ಬೆಡ್ಗಷ್ಟೇ ಇರುವ ಈ ರೂಮೇ ಬೆಡ್ರೂಮ್ ಅಂತ ಆ ಯೂಸರ್ ವಿಡಂಬನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಇದನ್ನು ನಿಜವಾದ ಬೆಡ್ರೂಮ್ ಎಂದರೂ ತಪ್ಪೇನಲ್ಲ.