'ಸೋಫಿಯಾ' ಥರನೇ ಇದ್ದಾಳೆ, 47 ಭಾಷೆ ಮಾತಾಡ್ತಾಳೆ; ಇವಳ ಸೃಷ್ಟಿಕರ್ತ ಇವರೇ...

Shalu
Published on

ನವದೆಹಲಿ: ಇವಳ ಹೆಸರು ಶಾಲು, ಈಕೆ 47 ಭಾಷೆಗಳನ್ನು ಮಾತನಾಡುತ್ತಾಳೆ. ಬಾಲಿವುಡ್​ನ ಸಿನಿಮಾವೊಂದರ ಪ್ರೇರಣೆಯಿಂದ 'ಹುಟ್ಟಿರುವ' ಈಕೆ ಹಾಂಗ್​ಕಾಂಗ್​ನ 'ಸೋಫಿಯಾ'ಳನ್ನೇ ಹೋಲುತ್ತಾಳಂತೆ. ಮುಂಬೈಯಲ್ಲಿನ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರೊಬ್ಬರು ಈಕೆಯ 'ಸೃಷ್ಟಿಕರ್ತ'.

ಅಂದಹಾಗೆ ಈಕೆ ಬೇರಾರೂ ಅಲ್ಲ.. ಬಾಂಬೆ ಐಐಟಿಯ ಕೇಂದ್ರೀಯ ವಿದ್ಯಾಲಯದಲ್ಲಿನ ಕಂಪ್ಯೂಟರ್ ಸೈನ್ಸ್​ ಉಪನ್ಯಾಸಕ ದಿನೇಶ್ ಪಟೇಲ್ ಅವರು ರೂಪಿಸಿರುವ ಮಾನವ ಕಂಪ್ಯೂಟರ್​. ಹುಡುಗಿಯನ್ನು ಹೋಲುವಂತೆ ರಚಿಸಿರುವ ಈ ಮಾನವ ಕಂಪ್ಯೂಟರ್​ಗೆ ಇವರು 'ಶಾಲು' ಎಂಬ ಹೆಸರನ್ನಿಟ್ಟಿದ್ದಾರೆ. ಇನ್ನು ಹಾಂಗ್​ಕಾಂಗ್​ನ ಹ್ಯಾನ್ಸನ್​ ರೋಬಾಟಿಕ್ಸ್​ ಅಭಿವೃದ್ಧಿಪಡಿಸಿರುವ ಮಾನವಕಂಪ್ಯೂಟರ್​​ 'ಸೋಫಿಯಾ'ಗೂ 'ಶಾಲು'ಗೂ ಹೋಲಿಕೆ ಇದೆಯಂತೆ.

ವಿಶೇಷವೆಂದರೆ ಬಾಲಿವುಡ್​ನ 'ರೋಬಾಟ್'​ ಸಿನಿಮಾದ ಪ್ರೇರಣೆಯಿಂದ ದಿನೇಶ್ ಈ ಮಾನವ ಕಂಪ್ಯೂಟರ್ ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮಾನವ ಕಂಪ್ಯೂಟರ್ ಶಾಲು 9 ಭಾರತೀಯ ಭಾಷೆಗಳ ಜತೆ 38 ವಿದೇಶಿ ಭಾಷೆಗಳನ್ನೂ ಸೇರಿ ಒಟ್ಟು 47 ಭಾಷೆಗಳನ್ನು ಮಾತನಾಡುತ್ತದೆ. ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್​, ಹಿಂದಿ, ಭೋಜಪುರಿ, ಮರಾಠಿ, ಬಾಂಗ್ಲಾ ಮತ್ತು ಗುಜರಾತಿ ಭಾಷೆಗಳನ್ನು ಶಾಲು ಮಾತನಾಡುತ್ತದೆ.

ಈ ಮಾನವ ಕಂಪ್ಯೂಟರ್ ಹೆಣ್ಣಿನಂತಿರುವುದಷ್ಟೇ ಅಲ್ಲ, ಹೆಣ್ಣಿನ ಥರವೇ ಮಾತನಾಡುತ್ತದೆ. ಮಾತ್ರವಲ್ಲ ಮನುಷ್ಯರಂತೆಯೇ ಹಲವಾರು ಭಂಗಿಗಳನ್ನು ಕೂಡ ತೋರಬಲ್ಲದು. ನಗುವುದು, ಕೈಕುಲುಕುವುದನ್ನು ಮಾಡುವ ಈ ಶಾಲು ಸಿಟ್ಟಿನಂಥ ಇತರ ಭಾವನೆಗಳನ್ನು ವ್ಯಕ್ತಪಡಿಸುತ್ತದೆ ಎಂಬುದಾಗಿ ದಿನೇಶ್ ಹೇಳಿಕೊಂಡಿದ್ದಾರೆ. ಶಾಲುವನ್ನು ತ್ಯಾಜ್ಯವಸ್ತುಗಳನ್ನು ಬಳಸಿಕೊಂಡು ಮಾಡಲಾಗಿದೆ. ಪ್ಲಾಸ್ಟಿಕ್​, ಕಾರ್ಡ್​ಬೋರ್ಡ್​, ಮರ, ಅಲ್ಯುಮಿನಿಯಂ ವಸ್ತುಗಳನ್ನು ಬಳಸಿ ಇದನ್ನು ತಯಾರಿಸಲಾಗಿದ್ದು, ಪೂರ್ಣಗೊಳಿಸಲು 50 ಸಾವಿರ ರೂಪಾಯಿ ಖರ್ಚು ಹಾಗೂ 3 ವರ್ಷಗಳ ಸಮಯ ತಗುಲಿದೆ ಎಂದು ದಿನೇಶ್ ಹೇಳಿದ್ದಾರೆ.

ನೆನಪಿನ ಶಕ್ತಿಯನ್ನು ಕೂಡ ಹೊಂದಿರುವ ಇದು ಕೆಲವರನ್ನು ಗುರುತಿಟ್ಟುಕೊಳ್ಳುವುದಷ್ಟೇ ಅಲ್ಲ, ಜನರಲ್ ನಾಲೆಜ್​, ಗಣಿತದಂಥ ವಿಷಯಗಳಿಗೆ ಉತ್ತರವನ್ನೂ ನೀಡಬಲ್ಲದು. ಇದು ಜನರಿಗೆ ವಿಷ್ ಮಾಡಬಲ್ಲದು, ಪೇಪರ್ ಓದಬಲ್ಲದು, ರೆಸಿಪಿಗಳನ್ನು ಹೇಳಬಲ್ಲದು ಮಾತ್ರವಲ್ಲ ಶಾಲೆಗಳಲ್ಲಿ ಶಿಕ್ಷಕಿಯಾಗಿ, ಕಚೇರಿಗಳಲ್ಲಿ ರಿಸೆಪ್ಷನಿಸ್ಟ್​ ಆಗಿಯೂ ಇದನ್ನು ಬಳಸಬಹುದು ಎನ್ನುತ್ತಾರೆ ದಿನೇಶ್. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net