ಮದ್ವೆಗೆ ಕೆಲವೇ ನಿಮಿಷಗಳಿರುವಾಗ ಪ್ರಿಯಕರನ ಜತೆ ವಧು ಪರಾರಿ; ಆಕೆಯ ತಂಗಿಯನ್ನೇ ಮದ್ವೆಯಾದ ವರ; ಕೊನೆಗೆ ಮೊದಲರಾತ್ರಿಗೂ ಬಂತು ಕುತ್ತು!

Untitled-1
Published on

ಒಡಿಶಾ: ಈ ವರನಿಗೆ ಮದುವೆಯೇ ಒಂದು ಥರ ಶಾಪದಂತಾಗಿದೆ. ಮದುವೆಯಾಗಲು ಹೊರಟ ಈ ಮದುಮಗನಿಗೆ ಒಂದರ ಮೇಲೊಂದು ತಲೆನೋವು ಎದುರಾಗಿದ್ದು, ಸದ್ಯಕ್ಕದು ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಮದುವೆಗೆ ನಿಶ್ಚಯವಾಗಿದ್ದ ಹುಡುಗಿ ಓಡಿಹೋದರೂ, ಆಕೆಯ ತಂಗಿಯೊಂದಿಗೆ ಮದುವೆ ನಡೆಯಿತು. ಆದರೂ ಈ ವರನಿಗೆ ಮದುವೆಯ ಖುಷಿಯೇ ಸಿಕ್ಕಿಲ್ಲ.

ಒಡಿಶಾದ ಕಾಳಹಂಡಿ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಈ ಮದುವೆ ನಡೆಯಬೇಕಿತ್ತು. ಆದರೆ ಮದುವೆಗೆ ಇನ್ನೇನು ಕೆಲವೇ ನಿಮಿಷಗಳು ಇದೆ ಎನ್ನುವಾಗ ಮಾಲ್ಪಡ ಗ್ರಾಮದವಳಾದ ಮದುಮಗಳು 26 ವರ್ಷದ ಯುವತಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಎಷ್ಟು ಹೊತ್ತಾದರೂ ವಧು ಕಾಣಿಸದಿದ್ದಾಗ ಎರಡೂ ಕುಟುಂಬಗಳ ಕಡೆಯವರು ಆತಂಕಕ್ಕೆ ಈಡಾಗಿದ್ದರು. ಆದರೆ ಅಷ್ಟರಲ್ಲಿ ಮರ್ಯಾದೆ ಪ್ರಶ್ನೆ ಎಂದು ವಧುವಿನ ಕಡೆಯವರು 15 ವರ್ಷದ ಇನ್ನೊಬ್ಬ ಮಗಳನ್ನು ವರನಿಗೆ ಧಾರೆ ಎರೆದರು.

ಇನ್ನೇನು ಹೇಗೋ ಮದುವೆಯಾಯಿತು ಎಂಬ ಸಮಧಾನದೊಂದಿಗೆ ಪತ್ನಿಯ ಜತೆ ಮನೆಗೆ ತೆರಳಿದ್ದ ವರನಿಗೆ ಮತ್ತೊಂದು ಶಾಕ್ ಕಾದಿತ್ತು. ಹುಡುಗಿಗೆ 15 ವರ್ಷವಷ್ಟೇ ಆಗಿರುವುದರಿಂದ ಅದು ಬಾಲ್ಯವಿವಾಹ ಎಂದಾಗುತ್ತದೆ ಎಂದು ವರನ ಮನೆಗೆ ಆಗಮಿಸಿದ್ದ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಆಕೆಯನ್ನು ರಕ್ಷಣೆ ಮಾಡಿ, ಆಕೆಯ ಮನೆಯವರಿಗೆ ಒಪ್ಪಿಸಿದ್ದಾರೆ.

ಆಕೆಗೆ 18 ವರ್ಷ ಆಗುವವರೆಗೂ ಮದುವೆ ಊರ್ಜಿತವಾಗುವುದಿಲ್ಲ ಎಂದು ಎರಡೂ ಕಡೆಯವರಿಗೆ ತಿಳಿಹೇಳಿದ ಅಧಿಕಾರಿಗಳು ನವವಧುವನ್ನು ತವರು ಮನೆಯವರಿಗೆ ಒಪ್ಪಿಸಿದ್ದಾರೆ. ಎರಡೂ ಕಡೆಯವರಿಗೂ ಬಾಲ್ಯವಿವಾಹ ಕಾನೂನುಬಾಹಿರ ಎಂಬ ಅರಿವಿಲ್ಲ ಎಂದಿರುವ ಅಧಿಕಾರಿಗಳು, ಇದೀಗ ಎರಡೂ ಕುಟುಂಬಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net