

ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೊನೆಗೂ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮ್ಮ ಬೆಂಬಲಿಗ ನೆಲಮಂಗಲದ ಮಾಜಿ ಶಾಸಕ ಎಂವಿ ನಾಗರಾಜ್ ಅವರ ಮೂಲಕ ಒಂದು ಪುಟದ ಕೈ ಬರಹದ ದೂರು ನೀಡಿರುವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿಯಲ್ಲಿರುವುದು ನಾನಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ನನ್ನನ್ನು ತೇಜೋವಧೆ ಮಾಡಲು ಕೆಲವರು ನಾಲ್ಕು ತಿಂಗಳಿನಿಂದ ಷಡ್ಯಂತ್ರ ನಡೆಸಿ, ನನ್ನದೇ ಎಂದು ಅಶ್ಲೀಲ ಸಿಡಿ ಬಿಡುಗಡೆ ಮಾಡಿದ್ದಾರೆ. ಇದರಿಂದ ನನ್ನ ತೇಜೋವಧೆ ಆಗಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ದೂರಿನಲ್ಲಿ ರಮೇಶ್ ಜಾರಕಿಹೊಳಿ ಕೇಳಿಕೊಂಡಿದ್ದಾರೆ. ದೂರಿಗೆ ರಮೇಶ್ ಜಾರಕಿಹೊಳಿ ಅವರೇ ಸಹಿ ಮಾಡಿದ್ದು, ನನ್ನನ್ನು ಬ್ಲಾಕ್ಮೇಲ್ ಮಾಡಲು ನನ್ನ ಹೆಸರಿನ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಜಾರಕಿಹೊಳಿ ದೂರಿದ್ದಾರೆ.
ದೂರು ಸ್ವೀಕರಿಸಿರುವ ಸದಾಶಿವನಗರ ಪೊಲೀಸ್ ಠಾಣೆ ಇನ್ಸಪೆಕ್ಟ್ರ್, ಎಸ್ಐಟಿಗೆ ವರ್ಗಾಯಿಸುತ್ತಾರೆ ಎನ್ನಲಾಗಿದೆ.