

ವಯನಾಡು: ಉಪ ಚುನಾವಣೆಯ ವಯನಾಡು (Wayanad) ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ, ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಇಂದೂ ಮುಂದುವರೆಸಿದ್ದಾರೆ. ಭಾರತೀಯ ಜನತಾ ಪಕ್ಷವು ವಿಭಜನೆಯನ್ನು ಪ್ರಚೋದಿಸುತ್ತದೆ. ದ್ವೇಷ, ಕೋಪ ಮತ್ತು ಅಪನಂಬಿಕೆಯನ್ನು ಜನರಲ್ಲಿ ಹರಡುತ್ತಿದೆ. ಸಮಾಜದಲ್ಲಿ ಬಿರುಕು ಮೂಡಿಸುವ ಮೂಲಕ ಬಿಜೆಪಿ ಲಾಭ ಪಡೆಯುತ್ತಿದೆ ಎಂದು ತಮ್ಮ ಭಾಷಣದಲ್ಲಿ ಆರೋಪಿಸಿದ್ದಾರೆ.
"ಪ್ರೀತಿ, ಶಾಂತಿ, ಭ್ರಾತೃತ್ವ ಇದ್ಯಾವುದು ಬಿಜೆಪಿಗೆ ಸರಿ ಹೊಂದುವುದಿಲ್ಲ. ಇದು ಬಿಜೆಪಿಗೆ ಹೊಂದಿಕೆಯಾಗುವುದಿಲ್ಲ ಏಕೆಂದರೆ, ಅವರ ರಾಜಕೀಯ ಇರುವುದು ಅಭಿವೃದ್ಧಿ ಅಥವಾ ಜನರ ಉತ್ತಮ ಭವಿಷ್ಯಕ್ಕಾಗಿ ಅಲ್ಲ. ವಿಭಜನೆ, ದ್ವೇಷ, ಕೋಪ, ಅಪನಂಬಿಕೆ ಮತ್ತು ಭಯವನ್ನು ಜನರಲ್ಲಿ ಹರಡುವುದು ಮಾತ್ರ ಅವರಿಗೆ ಗೊತ್ತಿರುವುದು. ಇವರಲ್ಲಿರುವ ಪ್ರತಿಯೊಬ್ಬ ನಾಯಕರಿಗೂ ಈ ವಿಭಜನೆಯಿಂದ ಲಾಭವಿದೆ. ಈ ರೀತಿಯ ರಾಜಕೀಯವು ಜನರನ್ನು ಹಿಂದೆ ಇಡುತ್ತದೆ ಮತ್ತು ಅವರನ್ನು ಪ್ರವರ್ಧಮಾನಕ್ಕೆ ತರಲು ಬಿಡುವುದಿಲ್ಲ" ಎಂದು ಆರೋಪಿಸಿದರು.
ಸತತವಾಗಿ ವಯನಾಡಿನಲ್ಲಿ ಉಪ ಚುನಾವಣೆಯ ಭಾಗವಾಗಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವ ಪ್ರಿಯಾಂಕಾ ಗಾಂಧಿ, ಈ ಬಾರಿ ನನಗೆ ಮತ ನೀಡಿ, ಸಂಸತ್ತಿನಲ್ಲಿ ನಿಮ್ಮನ್ನು ಪ್ರತಿನಿಧಿಸುವಂತೆ ಮಾಡಿ ಎಂದು ಮತ ಬಾಂಧವರಲ್ಲಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್).