ಬೆಂಗಳೂರು: ಮಿಡೆಲ್ ಕ್ಲಾಸ್ ಜೀವನವೇ ಒಂದು ರೀತಿ ಸಿಹಿ-ಕಹಿಯ ಮಿಶ್ರಣ. ಕಹಿಯಾದ ವಿಷಯಗಳೆಲ್ಲವೂ ಅಂದು ನಮ್ಮ ಪಾಲಿಗೆ ಸಿಹಿಯಾದ ಹಣ್ಣು. ಕಷ್ಟದ ಪರಿಸ್ಥಿತಿ, ಆರ್ಥಿಕ ಬಿಕ್ಕಟ್ಟು, ಸೂರಿನ ಪರದಾಟ, ತುತ್ತು ಅನ್ನಕ್ಕೂ ಹೆಣಗಾಟ. ಹೀಗೆ ನಾನಾ ಕಷ್ಟಗಳನ್ನು ನೋಡುತ, ಎದುರಿಸುತ ಬಾಲ್ಯವನ್ನು ಕಳೆದವರು. ಇಂದು ದೊಡ್ಡ ಸಂಸ್ಥೆಯಲ್ಲಿ, ಕೈತುಂಬ ಹಣ ಸಂಪಾದಿಸಿದರೂ ಸಹ ಇಂತಹ ಬದುಕು ಈ ಜೀವನದಲ್ಲಿ ಮತ್ತೊಮ್ಮೆ ಸಿಗಲಿಕ್ಕಿಲ್ಲ. ಸದ್ಯದ ಮಟ್ಟಿಗೆ ಅಂತಹ ಬದುಕು ಪ್ರಸ್ತುತ ಕಾಲಘಟ್ಟದಲ್ಲಿ ಬಹಳ ಕಡಿಮೆ ಎಂದೇ ಹೇಳಬಹುದು. ಈ ಅನುಭವ ಯಾರಿಗೆಲ್ಲಾ ಆಗಿದೆಯೋ ಅವರಿಗೆ ಖಂಡಿತ ತಮ್ಮ ಬಾಲ್ಯದ ದಿನಗಳು ನೆನಪಾಗುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: HD Kumaraswamy Statement | ನಿಖಿಲ್ ಏನೋ ಅಪರಾಧ ಮಾಡಿದ್ದಾನೆ ಎನ್ನುವ ಹಾಗೆ ಕಾಂಗ್ರೆಸ್ ಬಿಂಬಿಸುತ್ತಿದೆ
ಅಕ್ಕನ ಊಟದ ಬಾಕ್ಸ್ ತಮ್ಮನಿಗೆ, ಅಣ್ಣನ ಬಟ್ಟೆ ತಮ್ಮನಿಗೆ, ಒಂದು ಪಟಾಕಿ ಬಾಕ್ಸ್ನಲ್ಲಿ ಮನೆ ಮಂದಿಗೆಲ್ಲಾ ದೀಪಾವಳಿ, ಒಂದು ಕೆಜಿ ಸ್ವೀಟ್ ಬಾಕ್ಸ್ ಒಂದು ವಾರವಿಟ್ಟು ತಿನ್ನುವ ಪದ್ಧತಿ ಹೀಗೆ ಹಲವಾರು ವಿಷಯಗಳನ್ನು ಬಾಲ್ಯದಲ್ಲಿ ಯಾರೆಲ್ಲಾ ಅನುಭವಿಸಿದ್ದೀರೋ, ಅವರಿಗೆ ಇಂದು ನಾವು ಹೇಳುವ ವಿಷಯಗಳು ಪ್ರಾಯಶಃ ನೆನಪಿಗೆ ಬರಬಹುದು ಅಥವಾ ಅದನ್ನೂ ಮೀರಿದ ಅನುಭವಗಳು ಈಗ ಕಾಡಬಹುದು. ಮಧ್ಯಮ ವರ್ಗದವರ ಜೀವನ ಹೇಗಿತ್ತು? ಯಾವೆಲ್ಲ ಅನುಭವಗಳು ಅವರ ಜೀವನವನ್ನು ಹೋಲುತ್ತೆ ಎಂಬುದನ್ನು ಈ ಕೆಳಗೆ ತಿಳಿಸಿದ್ದೇವೆ ಗಮನಿಸಿ.
ಅಕ್ಕ-ತಂಗಿ, ಅಣ್ಣ-ತಮ್ಮ ಅಥವಾ..
ಕುಟುಂಬದಲ್ಲಿ ಅಣ್ಣ-ತಮ್ಮ ಅಥವಾ ಅಕ್ಕ-ತಂಗಿ ಇದ್ದರೆ ಸಾಕು, ಪೋಷಕರು ಅಕ್ಕನಿಗೆ ಬಾಲ್ಯದಲ್ಲಿ ತಂದ ಬಟ್ಟೆಯನ್ನು ತಂಗಿಗೆ ಧರಿಸಲು ಕೊಡುತ್ತಿದ್ದರೆ ವಿನಃ ಹೆಚ್ಚು ಉಡುಗೆಯನ್ನು ಖರೀದಿ ಮಾಡುತ್ತಿರಲಿಲ್ಲ. ಏಕೆಂದರೆ, ಅಂದು ಹಣದ ಅಭಾವ ಕಾಡುತ್ತಿತ್ತು. ದುಡ್ಡು ಎಂದರೆ ದೊಡ್ಡ ಮಾತು. 1 ರೂ. ನಾಣ್ಯ ಉಳಿದರೂ ಅಮ್ಮ ಅದನ್ನು ಸಾಸಿವೆ, ಜೀರಿಗೆ ಡಬ್ಬದಲ್ಲಿ ಉಳಿಸಿ, ಸಾಮಾಗ್ರಿ ಖರೀದಿಗೆ ಬಳಸುತ್ತಿದ್ದರು. ಕೇವಲ ನಮ್ಮ ಅಣ್ಣಂದಿರ ಬಟ್ಟೆಯನ್ನು ಉಪಯೋಗಿಸದ ನಾವು, ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳು ತೊಡುತ್ತಿದ್ದ ಬಟ್ಟೆಗಳನ್ನು ಪಡೆದು, ಧರಿಸುತ್ತಿದ್ದೆವು. ಅಂದು ಸಹೋದರ-ಸಹೋದರಿಯರ ಉಡುಗೆಗಳು ಒಂದೇ ಕುಟುಂಬದಲ್ಲಿ ಎರಡು ತಲೆಮಾರಿನವರೆಗೂ ಓಡಾಡುತ್ತಿದ್ದವು ಎಂಬುದನ್ನು ನಂಬುತ್ತೀರಾ? ಇಲ್ಲ ಎಂದರೂ ಇದು ನಂಬುವಂತ ವಿಚಾರವೇ.
ಸೆಕೆಂಡ್ ಹ್ಯಾಂಡ್ ವಸ್ತುಗಳೇ ಹಬ್ಬ
ವಸ್ತ್ರ, ಮನೆಗೆ ಬೇಕಾದ ಕುರ್ಚಿ, ಸೋಫಾ ಸೆಟ್, ಹೆಣ್ಣಿನ ಅಲಂಕಾರಿಕ ವಸ್ತುಗಳು ಹೀಗೆ ಹಲವು ಬಗೆಯ ಸೆಕೆಂಡ್ ಹ್ಯಾಂಡ್ ವಸ್ತುಗಳು ಮಾರುಕಟ್ಟೆಯಲ್ಲಿ ಪ್ರತ್ಯೇಕವಾದ ಮಳಿಗೆಗಳಲ್ಲಿ ಲಭ್ಯವಿರುತ್ತಿತ್ತು. ದೊಡ್ಡ ಶಾಪಿಂಗ್ ಮಾಲ್ಗೆ ಹೋಗಲು ಹಣವಿಲ್ಲದ ಮಿಡೆಲ್ ಕ್ಲಾಸ್ ಕುಟುಂಬಗಳು, ಇಲ್ಲಿಯೇ ತಮಗೆ ಹಾಗೂ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದರು. ಅಂದು ನಮ್ಮ ಪಾಲಿಗೆ ಇದೇ ಬ್ರ್ಯಾಂಡೆಡ್ ಸ್ಟೋರ್.
ಹಳ್ಳಿ, ತವರೇ ಲಕ್ಸುರಿ ಟ್ರಿಪ್
ಊಟಿ, ಗೋವಾ, ಹೊರ ರಾಜ್ಯಗಳ ಟ್ರಿಪ್ಗೆ ಹೋಗುವ ತವಕ ಅನೇಕರದ್ದು. ಇದಕ್ಕೆ ಬಹಳ ಹಣದ ಅವಶ್ಯಕತೆ ಇರುತ್ತಿತ್ತು. ಅದರಲ್ಲೂ ಮನೆಯವರೆಲ್ಲರೂ ಹೋಗಬೇಕು ಎಂದರೆ ಬಹಳ ಕಷ್ಟಕರ ಪರಿಸ್ಥಿತಿ. ಆಗ ನಮಗೆಲ್ಲ ನಮ್ಮ ನೆಂಟರು-ಸಂಬಂಧಿಕರ ಊರು, ಮನೆಗಳಿಗೆ ಹೋಗುವುದೇ ಐಷಾರಾಮಿ ಟ್ರಿಪ್. ಸಾರಿಗೆ ಬಸ್ಸುಗಳು, ಕಡಿಮೆ ವೆಚ್ಚದ ರೈಲಿನಲ್ಲಿ ಪ್ರಯಾಣಿಸಿ, ಬಿರು ಬಿಸಿಲಿನಲ್ಲಿ ಲಗ್ಗೇಜ್ ಹೊತ್ತು ಕುಟುಂಬಸ್ಥರ ಮನೆ ಸೇರುವುದು ಖುಷಿಯೋ ಖುಷಿ. ಇದೇ ಮಿಡೆಲ್ ಕ್ಲಾಸ್ ಜನಕ್ಕೆ ಅಂದು ಲಕ್ಸುರಿ ಟ್ರಿಪ್ ಆಗಿತ್ತು.
ಒಂದು ಸ್ಕೂಲ್ ಬ್ಯಾಗ್- ಒಂದು ಜತೆ ಶೂ
ಸ್ಕೂಲ್ಗೆ ಸೇರಿದ ಮೇಲೆ ಒಂದು ತರಗತಿ ಶುರುವಾಗುವ ಮುನ್ನ ಅಪ್ಪ-ಅಮ್ಮ ತೆಗೆದುಕೊಟ್ಟ ಶಾಲಾ ಬ್ಯಾಗ್ ಮತ್ತು ಒಂದು ಜತೆ ಸ್ಕೂಲ್ ಶೂ ಹರಿಯುವ ತನಕ ನಮ್ಮೊಂದಿಗೆ ಬದುಕುತ್ತಿತ್ತು. ಅದು ಹೇಗೆ ಇರಲಿ, ಯಾವ ಕಂಪೆನಿಯದ್ದೇ ಆಗಿರಲಿ. ಒಮ್ಮೆ ಕೊಡಿಸದ ಮೇಲೆ ಅದು ಚಿಂದಿಯಾಗಿ ಇನ್ನೇನು ಉಪಯೋಗಿಸಲು ಯೋಗ್ಯವಿಲ್ಲ ಎಂದು ನಮಗಲ್ಲ, ನಮ್ಮ ಹೆತ್ತವರಿಗೆ ಅನಿಸುವವರೆಗೂ ನಾವದನ್ನು ಬಳಸಬೇಕಿತ್ತು. ಅಂದು ಇದು ನಿಜಕ್ಕೂ ನಮಗೆ ಕಣ್ಣೀರು ತರಿಸುತ್ತಿತ್ತು. ಏಕೆಂದರೆ, ನಮ್ಮ ಸಹಪಾಠಿಗಳೆಲ್ಲ ಬ್ರ್ಯಾಂಡೆಡ್ ಬ್ಯಾಗ್ಗಳು ಮತ್ತು ಹೊಸ ಶೂ ಧರಿಸಿದ್ದರೇ ನಾವು ಮಿಡೆಲ್ ಕ್ಲಾಸ್ ಮಂದಿ, ಹರಿದ ಕಾಲುಚೀಲ (SOCKS), ಶೂ ಮತ್ತು ಬ್ಯಾಗ್ಗಳನ್ನು ಹಿಡಿದು, ವಿದ್ಯಾಭ್ಯಾಸ ಪಡೆಯಬೇಕಿತ್ತು. ಇಂದು ಒಂದು ಹಂತಕ್ಕೆ ಕಷ್ಟ ಅರಿತಿದ್ದೇವೆ, ಇನ್ನೊಬ್ಬರಿಗೆ ತಿಳಿ ಹೇಳುವ ಮಟ್ಟಿಗೆ ಬೆಳೆದಿದ್ದೇವೆ ಎಂದರೆ ಅದಕ್ಕೆ ಇಂತಹ ಅನುಭವಗಳೇ ಕಾರಣ.
ಅಪ್ಪ-ಅಮ್ಮನ ಶ್ರಮದ ಬೆವರೇ ನಮಗೆ ಪಾಠ
ಸಣ್ಣ-ಪುಟ್ಟ ಹಾಗೂ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿಕೊಂಡು ಮನೆಗೆ ದಣಿದು ಬರುತ್ತಿದ್ದ ಅಪ್ಪ-ಅಮ್ಮ, ಕಷ್ಟದ ಮುಖವನ್ನು ನಮಗೆ ತೋರಿಸದೆ, ಖುಷಿ ಕ್ಷಣಗಳನ್ನು ಹೊತ್ತು ತರುತ್ತಿದ್ದರು. ದೀರ್ಘ ಗಂಟೆಗಳ ಅವಧಿ ಕೆಲಸ ಮಾಡಿದರೂ ಸಹ ಅಷ್ಟೇ ಉತ್ಸಾಹದಲ್ಲಿ ಮಕ್ಕಳ ಆರೈಕೆ ಮಾಡುತ್ತಿದ್ದರು. ತಿಂಗಳಾಂತ್ಯದಲ್ಲಿ ಕೂಡಿಟ್ಟ ಸಂಪಾದನೆಯನ್ನು ಅಳೆದು ತೂಗಿ ಲೆಕ್ಕಾಚಾರದಲ್ಲಿ ಖರ್ಚು ನಿಭಾಯಿಸುತ್ತಿದ್ದರು. ನಮ್ಮ ಪೋಷಕರ ತ್ಯಾಗ, ತುಡಿತ ಇಂದು ನಮಗೆ ನೂರಾರು ಪಾಠಗಳನ್ನು ಹೇಳಿಕೊಟ್ಟಿದ್ದು, ಅವರಂತೆಯೇ ನಾವು ಜವಾಬ್ದಾರಿಯಿಂದ, ಕಠಿಣ ಶ್ರಮ ವಹಿಸಿ ಬೇಕಾದ್ದನ್ನು ಪಡೆಯಬೇಕೇ ಹೊರತು ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬಾರದು ಎಂಬುದನ್ನು ಕಲಿತಿದ್ದೇವೆ. ಇದು ಮಿಡೆಲ್ ಕ್ಲಾಸ್ ಜೀವನ ಕಂಡ ಪ್ರತಿಯೊಬ್ಬರಿಗೂ ನೆನಪಿನಲ್ಲಿರುತ್ತದೆ.
ಇನ್ನೇನು ಕೆಲವೇ ದಿನಗಳಲ್ಲಿ ಮದುವೆ… ನೂರಾರು ಕನಸು ಕಂಡಿದ್ದ ವಧು ಸಾವಿಗೆ ಕಾರಣವಾಯ್ತು ಅದೊಂದು ವ್ಯಥೆ! | Suicide