

ನವದೆಹಲಿ: ಜೆಡಿಎಸ್ ವರಿಷ್ಠ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಎನ್ಡಿಎ ಮೈತ್ರಿಕೂಟದ ಜೊತೆ ಜೆಡಿಎಸ್ ಸೇರಿಕೊಳ್ಳುವ ಕುರಿತು ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ. ಈ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿ ಇಂದು ಅಧಿಕೃತಗೊಂಡಿದೆ.
ಎನ್ಡಿಎ ಮೈತ್ರಿಕೂಟವನ್ನು ಜೆಡಿಎಸ್ ಸೇರಿಕೊಳ್ಳುವ ನಿರ್ಧಾರ ಹೊರಬಿದ್ದ ಬಳಿಕ, ಬಿಜೆಪಿಯ ಹಲವಾರು ನಾಯಕರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂತೋಷವನ್ನು ವ್ಯಕ್ತಪಡಿಸಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇನ್ನು ಈ ಮೈತ್ರಿ ಕುರಿತು ಎಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ನಿಖಿಲ್, ಸೀಟು ಹಂಚಿಕೆ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಈ ಮೈತ್ರಿ ಇನ್ನೂ ಅಷ್ಟು ಆಳಕ್ಕೆ ಹೋಗಿಲ್ಲ. ಆ ಕುರಿತ ಮಾತುಕತೆಗಳಿಗೆ ಇನ್ನೊಂದಷ್ಟು ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ನಮ್ಮ ಈ ನಿರ್ಧಾರ ಕರ್ನಾಟಕದ ಜನರ ಒಳಿತಿಗಾಗಿ ಎಂದಿರುವ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ಜತೆ ಮೈತ್ರಿಗೆ ಸಂಬಂಧಿಸಿದ ಈ ನಿರ್ಧಾರ ಸದಾ ಜಾತ್ಯತೀತ ನಿಲುವು ಹೊಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪಾಲಿಗೆ ಮಹತ್ವವಾದುದು ಎಂದಿದ್ದಾರೆ.