ಅನಂತ್​ ನಾಗ್​ ತಾತ, ದಿಗಂತ್​ ಮೊಮ್ಮಗ; 30 ವರ್ಷಗಳ ನಂತರ ಭೇಟಿ

Thimmaiah and Thimmaiah
Published on

ಬೆಂಗಳೂರು: ಅನಂತ್​ ನಾಗ್​ ಮತ್ತು ದಿಗಂತ್​ ಇಬ್ಬರೂ 'ಮುಂಗಾರು ಮಳೆ', 'ಗಾಳಿಪಟ', 'ಗಾಳಿಪಟ 2' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರೂ ತಾತ-ಮೊಮ್ಮಗನಾಗಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ಹೆಸರು 'ತಿಮ್ಮಯ್ಯ & ತಿಮ್ಮಯ್ಯ'.

ಅನಂತ್​ ನಾ್​ ಮತ್ತು ದಿಗಂತ್​ ಇಬ್ಬರೂ 'ತಿಮ್ಮಯ್ಯ & ತಿಮ್ಮಯ್ಯ' ಎಂಬ ಚಿತ್ರದಲ್ಲಿ ತಾತ-ಮೊಮ್ಮಗನಾಗಿ ನಟಿಸುತ್ತಿದ್ದಾರೆ ಎಂಬ ವಿಷಯ ಗೊತ್ತಾಗಿದ್ದು, ಕಳೆದ ತಿಂಗಳು ಟೀಸರ್​ ಬಿಡುಗಡೆಯಾದಾಗ. ಈಗ ಚಿತ್ರದ ಇನ್ನೊಂದು ಟೀಸರ್​ ಇತ್ತೀಚೆಗೆ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿದೆ.

30 ವರ್ಷಗಳ ನಂತರ ತಾತ ಹಾಗೂ ಮೊಮ್ಮಗ ಭೇಟಿಯಾದಾಗ ಯಾವ ರೀತಿ ಇರಬಹುದು? ಎಂಬುದನ್ನು ಟೀಸರ್ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸಂಜಯ್ ಶರ್ಮ. ಅನಂತ್​ ನಾಗ್​ ಮತ್ತು ದಿಗಂತ್​ ಅವರ ನಡುವಿನ ಬಾಂಧವ್ಯದ ಸನ್ನಿವೇಶಗಳೇ ಈ ಚಿತ್ರದ ಹೈಲೆಟ್ ಅಂತೆ. ಟೀಸರ್​ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ.

ಗರುಡ ಮೋಷನ್ ಪಿಕ್ಚರ್ಸ್ ಪ್ರೈ ಸಂಸ್ಥೆಯಡಿ ರಾಜೇಶ್​ ಶರ್ಮ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಂಜಯ್ ಶರ್ಮ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಬಾಲಿವುಡ್​​ನ ಖ್ಯಾತ ನಿರ್ದೇಶಕರ ಬಳಿ ಕೆಲಸ ಕಲಿತು ಬಂದಿರುವ ಸಂಜಯ್ ಶರ್ಮ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ.

ಅನಂತನಾಗ್, ದಿಗಂತ್, ಶುಭ್ರ ಅಯ್ಯಪ್ಪ, ರುಕ್ಮಿಣಿ ವಿಜಯಕುಮಾರ್, ವಿನೀತ್ ಬೀಪ್ ಕುಮಾರ್, ಪ್ರಕಾಶ್ ತುಮ್ಮಿನಾಡ್, ಕೆ.ಎಸ್.ಶ್ರೀಧರ್, ಮಿಮಿಕ್ರಿ ಗೋಪಿ, ಅಂಬುಜಾಕ್ಷಿ ಮುಂತಾದವರು ನಟಿಸಿರುವ ಈ ಚಿತ್ರವು ಇದೀಗ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ.

'ತಿಮ್ಮಯ್ಯ & ತಿಮ್ಮಯ್ಯ' ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಬಾಲಕೃಷ್ಣ ತೋಟ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರು, ಕೊಡಗು ಹಾಗೂ ಕುಣಿಗಲ್ ನಲ್ಲಿ ಚಿತ್ರೀಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net