ಉರಿಸಿದವರೂ ಅವರೇ, ಸಹಾಯ ಮಾಡಲು ಬಂದವರೂ ಅವರ ಕಡೆಯವರೇ; ಈ ಮೇಷ್ಟ್ರ ಪರಿಸ್ಥಿತಿ ಕಡೆಗಾಗಿದ್ದೇ ಬೇರೆ..!

ಬ್ಯಾಂಕ್​​ನಿಂದ ಹಣ ಡ್ರಾ ಮಾಡಿ ಹೊರ ಬಂದ ಶಿಕ್ಷಕ, ನಂತರ ಏನಾಯ್ತು ನೀವೆ ನೋಡಿ... #Theft #Teacher #Chamrajnagar - youtube
Published on

ಚಾಮರಾಜನಗರ: ರಾಜಧಾನಿ ಬೆಂಗಳೂರಿನ ಹೊರವಲಯದ ಪ್ರದೇಶಗಳಲ್ಲಿ ವಾಹನಗಳ ಮುಂದಿನ ಗಾಜಿನ ಮೇಲೆ ಮೊಟ್ಟೆ ಎಸೆದು, ವೈಪರ್ ಮೂಲಕ ಚಾಲಕ ಅದನ್ನು ಸ್ವಚ್ಛಗೊಳಿಸಿಕೊಳ್ಳಲು ಹೋದಾಗ ಗಾಜಿನ ತುಂಬಾ ಮೊಟ್ಟೆಯ ಲೋಳೆ ಹರಡಿ ರಸ್ತೆ ಕಾಣದಂತೆ ಆಗುತ್ತದೆ. ಆಗ ಚಾಲಕ ವಾಹನ ನಿಲ್ಲಿಸುತ್ತಿದ್ದಂತೆ ಕಳ್ಳರು ದಾಳಿ ಮಾಡಿ ಕಳವು ಮಾಡುವುದೀಗ ಹಳೇ ತಂತ್ರ.

ಈಗ ಅಂಥದ್ದೇ ಒಂದು ತಂತ್ರವನ್ನು ಹೋಲುವಂಥ ಮತ್ತೊಂದು ಕುತಂತ್ರಕ್ಕೆ ಕಳ್ಳರು ಮೊರೆ ಹೋಗಿದ್ದಾರೆ. ಆ ಪೈಕಿ ಚಾಮರಾಜನಗರದಲ್ಲಿ ಒಂದು ಕಳ್ಳತನ ಪ್ರಕರಣ ವರದಿಯಾಗಿದೆ. ಇಲ್ಲಿ ಶಿಕ್ಷಕರೊಬ್ಬರನ್ನು 'ಉರಿಸಿದ' ಖದೀಮರು, ಬಳಿಕ ಅವರ ಕಡೆಯವರಿಂದಲೇ ಸಹಾಯ ಮಾಡಿಸಿ, ಫಜೀತಿಗೆ ತಂದಿಟ್ಟು ಹೋಗಿದ್ದಾರೆ.

ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಚಾಮರಾಜನಗರ ತಾಲೂಕು ಕಾಳನಹುಂಡಿ ಹಿರಿಯ ಪ್ರಾಥಮಿಕ ‌ಶಾಲೆಯ ಶಿಕ್ಷಕ ಶಿವಕುಮಾರ್ ಬ್ಯಾಂಕ್​ನಿಂದ 2 ಲಕ್ಷ ರೂ. ಡ್ರಾ ಮಾಡಿಕೊಂಡು ಬ್ಯಾಗ್​ನಲ್ಲಿ ಹಾಕಿಕೊಂಡು ಬಂದು ಬಸ್​ಗಾಗಿ ಕಾದು ನಿಂತಿದ್ದರು.

ಆಗ ವ್ಯಕ್ತಿಯೊಬ್ಬ ಶಿಕ್ಷಕನಿಗೆ ಹಿಂದಿನಿಂದ ರಾಸಾಯನಿಕವೊಂದನ್ನು ಸ್ಪ್ರೇ ಮಾಡಿ ಪರಾರಿಯಾಗಿದ್ದಾನೆ. ಅದೇ ಸಂದರ್ಭದಲ್ಲಿ ಆ ಕಳ್ಳರ ಗ್ಯಾಂಗ್​ನ ಮತ್ತೊಬ್ಬ ಸಹಾಯದ ಸೋಗಲ್ಲಿ ಶಿಕ್ಷಕರ ಬಳಿ ಬಂದಿದ್ದಾನೆ. ಉರಿ ತಾಳಲಾರದ ಶಿಕ್ಷಕ ಶರ್ಟ್ ಬಿಚ್ಚಿದ್ದಾರೆ. ಸಹಾಯಕ್ಕೆ ಬಂದಾತ ನೀರು ಹಾಕುವ ನೆಪದಲ್ಲಿ ಪಕ್ಕಕ್ಕೆ ಕರೆದಿದ್ದಾನೆ. ಆಗ ಶಿಕ್ಷಕ ಪಕ್ಕಕ್ಕೆ ಹೋಗುತ್ತಿದ್ದಂತೆ ಕಳ್ಳರ ಗ್ಯಾಂಗ್​ನ ಮತ್ತೊಬ್ಬ ಹಣವಿದ್ದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ವಲ್ಪೇ ಸ್ವಲ್ಪ ಮೈಮರೆತಿದ್ದಕ್ಕೆ ಶಿಕ್ಷಕ 2 ಲಕ್ಷ ರೂ. ಕಳೆದುಕೊಳ್ಳುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net