ಚಲಿಸುತ್ತಿದ್ದ ಬೈಕ್​ನಿಂದಲೇ ಹಣದ ಕಟ್ಟು ಎಗರಿಸಿದ ಕಳ್ಳ; ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು..

Thief
Published on

ಬಾಗಲಕೋಟೆ: ಹಣವನ್ನು ಹಿಡಿದುಕೊಂಡು ಹೋಗುವವರು ಮೈಮರೆತರೆ ಅಥವಾ ಆ ಬಗ್ಗೆ ಹೆಚ್ಚಿನ ನಿಗಾ ವಹಿಸದಿದ್ದರೆ ಏನಾಗಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಇಲ್ಲೊಬ್ಬ ಬೈಕ್​ ಸವಾರನ ಹಣವನ್ನು ಕಳ್ಳನೊಬ್ಬ ಬೈಕ್ ಚಲಿಸುತ್ತಿದ್ದಾಗಲೇ ಕದ್ದರೂ ಆತನಿಗೆ ಗೊತ್ತೇ ಆಗಿಲ್ಲ.

ಬಾಗಲಕೋಟೆ ಜಿಲ್ಲೆಯ ತೇರದಾಳ ಗ್ರಾಮದಲ್ಲಿ ಈ ಕಳ್ಳತನ ನಡೆದಿದೆ. ಬೈಕ್​ ಸವಾರ ತೇರದಾಳ ಪಟ್ಟಣದ ಸಿಂಡಿಕೇಟ್ ಬ್ಯಾಂಕ್​ನಲ್ಲಿ ಹಣ ಡ್ರಾ ಮಾಡಿದ್ದು, ಆತನನ್ನು ಅಲ್ಲಿಂದಲೇ ಈ ಕಳ್ಳ ಹಿಂಬಾಲಿಸಿಕೊಂಡು ಬಂದಿದ್ದ ಎನ್ನಲಾಗಿದೆ. ಬ್ಯಾಂಕ್​ನಿಂದ ಹಣ ಪಡೆದು ಬೈಕ್​ನ ಸೈಡ್​ ಬ್ಯಾಗ್​ನಲ್ಲಿ ಇರಿಸಿಕೊಂಡು ಹೊರಟಿದ್ದ ಸವಾರ ತೇರದಾಳ ಮಾರುಕಟ್ಟೆ ಬಳಿ ನಿಧಾನವಾಗಿ ಚಲಿಸುತ್ತಿದ್ದಾಗ ಈ ಕಳ್ಳ ತನ್ನ ಕರಾಮತ್ತು ತೋರಿಸಿದ್ದಾನೆ.

ಕಳ್ಳ ಬೈಕ್​ನ ಸೈಡ್ ಬ್ಯಾಗ್​ನಿಂದ ಹಣ ಎಗರಿಸಿರುವ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್​ ಸವಾರ ಸಸಾಲಟ್ಟಿ ಗ್ರಾಮದವ ಎನ್ನಲಾಗಿದ್ದು, ಇನ್ನೂ ಖಚಿತ ಮಾಹಿತಿ ಹೊರಬಿದ್ದಿಲ್ಲ. ಈ ಪ್ರಕರಣ ಇಂದು ಮಧ್ಯಾಹ್ನ ನಡೆದಿದ್ದು, ತೇರದಾಳ ಠಾಣೆಯಲ್ಲಿ ಈ ಬಗ್ಗೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಬೈಕ್​ ಸವಾರ ಯಾರು, ಕಳೆದುಕೊಂಡ ಹಣವೆಷ್ಟು ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭಿಸಿಲ್ಲ. ಅದಾಗ್ಯೂ ಜನನಿಬಿಡ ಪ್ರದೇಶದಲ್ಲಿ ಕಳ್ಳ ಹಣ ಎಗರಿಸಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿರುವುದು ಉಳಿದವರಿಗೆ ಒಂದು ಎಚ್ಚರಿಕೆಯ ಸಂದೇಶ ಎಂಬಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net