ಈ ರಾಜ್ಯದ ಶಾಲೆಗಳಲ್ಲಿ ಕುಡಿಯುವ ನೀರಿಗಾಗಿ ಕೇಳಿಸಲಿದೆ ಸೌಂಡ್! 'ವಾಟರ್​ ಬೆಲ್'​ ವ್ಯವಸ್ಥೆಗೆ ಅನೇಕರು ಫಿದಾ

WhatsApp-Image-2024-04-04-at-7.47.22-AM
Published on

ದೇಶವ್ಯಾಪಿ ಬಿಸಿಲಿನ ತಾಪಮಾನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಬೇಸಿಗೆಯ ಬೇಗೆ ತಾಳಲಾರದೆ ತಂಪು..ತಂಪು ಪಾನಿಯಗಳನ್ನು ಕುಡಿಯುವ ಅಭ್ಯಾಸ ಸೇರಿದಂತೆ ಯಥೇಚ್ಚವಾಗಿ ನೀರು ಸೇವಿಸುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಹವಾಮಾನ ಇಲಾಖೆ ಎಚ್ಚರಿಸಿರುವಂತೆ ಮುಂಬರುವ ಏಪ್ರಿಲ್​-ಜೂನ್​ ತಿಂಗಳಲ್ಲಿ ತಾಪಮಾನದಲ್ಲಿ ಭಾರೀ ಹೆಚ್ಚಳ ಕಂಡುಬರಲಿದೆ ಎಂದು ತಿಳಿಸಿದೆ. ಈ ಮಧ್ಯೆ ಇಲ್ಲೊಂದು ರಾಜ್ಯದ ಶಾಲೆಗಳಲ್ಲಿ ಮೂರು ಬಾರಿ ಕುಡಿಯುವ ನೀರಿಗಾಗಿ ಬೆಲ್​ವೊಂದು ಧ್ವನಿ ಹೊರಡಿಸಲಿದ್ದು, ಇದರಿಂದ ಮಕ್ಕಳು ಎಚ್ಚರಗೊಂಡು ನೀರನ್ನು ಕುಡಿಯುತ್ತಾರೆ.

ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿರಿಸಲು ವಿದ್ಯಾರ್ಥಿಗಳು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಇದನ್ನು ಖಚಿತಪಡಿಸಿಕೊಳ್ಳಲು ಕೇರಳ ಸರ್ಕಾರವು ಶಾಲೆಗಳಲ್ಲಿ "ವಾಟರ್-ಬೆಲ್" ವ್ಯವಸ್ಥೆಯನ್ನು ಜಾರಿಗೆ ತರಲು ದಾಪುಗಾಲಿಟ್ಟಿದೆ. ಈ ವ್ಯವಸ್ಥೆಯನ್ನು ದೇಶದಲ್ಲಿ ಪರಿಚಯಿಸಿದ ಮೊದಲ ರಾಜ್ಯ ಕೇರಳ ಎಂದು ರಾಜ್ಯ ಜನರೆಲ್ ಶಿಕ್ಷಣ ಸಚಿವರ ಕಚೇರಿ ಮಾಹಿತಿ ಹಂಚಿಕೊಂಡಿದೆ.

“2019ರಲ್ಲಿ ಮೊದಲ ಬಾರಿಗೆ ನಾವು ಕೆಲವು ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಹೆಚ್ಚಿನ ತಾಪಮಾನದ ಮಟ್ಟದಿಂದಾಗಿ ಇದನ್ನು ಜಾರಿಗೆ ತಂದಿದ್ದೇವೆ. ನಮ್ಮ ನಂತರದಲ್ಲಿ ಕರ್ನಾಟಕ, ತೆಲಂಗಾಣದಂತಹ ರಾಜ್ಯಗಳು ಇದನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೆ ತಂದಿವೆ. ಈಗ ಹೆಚ್ಚುತ್ತಿರುವ ಪಾದರಸದ ಮಟ್ಟವನ್ನು ಪರಿಗಣಿಸಿ ನಾವು ರಾಜ್ಯದಾದ್ಯಂತ ಶಾಲೆಗಳಲ್ಲಿ ಇದನ್ನು ಜಾರಿಗೊಳಿಸಿದ್ದೇವೆ ಎಂದು ಕಚೇರಿ ತಿಳಿಸಿದೆ.

ಎಲ್ಲಾ ಶಾಲೆಗಳಲ್ಲಿ ಬೆಳಗ್ಗೆ 10.30 ಮತ್ತು ಮಧ್ಯಾಹ್ನ 2.30ಕ್ಕೆ ಎರಡು ಬಾರಿ ಬೆಲ್ ಬಾರಿಸಲಾಗುವುದು. ಇದು ಮಕ್ಕಳಿಗೆ ನೀರು ಕುಡಿಯುವಂತೆ ಅಲರ್ಟ್​ ಮಾಡುತ್ತದೆ. ಹವಾಮಾನ ವೈಪರೀತ್ಯದಿಂದ ರಾಜ್ಯದಲ್ಲಿ ತಾಪಮಾನ ಗರಿಷ್ಠವಾಗಿ ಏರಿಕೆಯಾಗುತ್ತಿದ್ದು, ಶಾಲಾ ಅವಧಿಯಲ್ಲಿ ಮಕ್ಕಳು ಸಾಕಷ್ಟು ನೀರು ಸೇವಿಸುವಂತೆ ನೋಡಿಕೊಳ್ಳುವುದು ಅಗತ್ಯ. ಇದು ಮಕ್ಕಳಲ್ಲಿ ನಿರ್ಜಲೀಕರಣ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net