| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ದೇಶದಲ್ಲೇ ‘ಸೈ’ ಎನಿಸಿಕೊಳ್ಳುವ ರಾಜ್ಯ ಸರ್ಕಾರದ ಆಶಯಕ್ಕೆ ತೆರಿಗೆ ಸಂಗ್ರಹವು ಗುರಿ ತಲುಪದೇ ಇರುವುದು ಮತ್ತು ಲಕ್ಷ್ಮಣರೇಖೆ ದಾಟಿ ಸಾಗಿರುವ ಸಾಲ ಪಡೆಯುವಿಕೆಯ ಬೆಳವಣಿಗೆ ಎಚ್ಚರಿಕೆ ಗಂಟೆಯನ್ನು ಬಾರಿಸಿದೆ.
ಪ್ರಸ್ತುತ ಎಲ್ಲ ಇಲಾಖೆಗಳ ಲೆಕ್ಕಾಚಾರ ಕೊನೇ ಹಂತ ತಲುಪಿದೆ. 2023-24ನೇ ಸಾಲಿನ ಆರ್ಥಿಕ ವರ್ಷದ ಅಂತ್ಯದಲ್ಲಿ ಸರ್ಕಾರಕ್ಕೆ ಬರಬೇಕಾದಷ್ಟು ತೆರಿಗೆ ಸಂಗ್ರಹವೇ ಆಗಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಕಹಿ ಅನುಭವ ನೀಡಿದೆ. ಹೊಸ ಸರ್ಕಾರ ರಚನೆ ಯಾಗುತ್ತಿದ್ದಂತೆ ಗ್ಯಾರಂಟಿ ಅನುಷ್ಠಾನದ ನಡುವೆಯೇ ಬಜೆಟ್ ಮಂಡಿಸಿ ಬೇರೆ ಅಭಿವೃದ್ಧಿಗೆ ಹಣ ಮೀಸಲಿಡುವುದು ಕತ್ತಿಯಲುಗಿನ ಮೇಲಿನ ನಡಿಗೆಯಾಗಿತ್ತು. ಅಂಥ ದ್ದರಲ್ಲೂ ಸರ್ಕಾರ ತೆರಿಗೆ ಸಂಗ್ರಹ ಗುರಿಯನ್ನು ವಿಸ್ತರಿಸಿ ಧೈರ್ಯ ತೋರಿತ್ತು. ಅಂದರೆ 2023-24ರ ಫೆಬ್ರವರಿಯಲ್ಲಿ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದ್ದರು. ಬಳಿಕ ತೆರಿಗೆ ಸಂಗ್ರಹ ವಿಸ್ತರಿಸಿಕೊಂಡು 2023ರ ಜುಲೈನಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದರು. ಗ್ಯಾರಂಟಿ ಕಾರ್ಯಕ್ರಮಕ್ಕೆ ಹಣ ಹೊಂದಿಸುವುದು, ಇತರ ಅಭಿವೃದ್ಧಿ ಕಾರ್ಯಕ್ಕೆ ಹಣ ಕೊರತೆ ಆಗಬಾರದೆಂಬ ಲೆಕ್ಕಾಚಾರದಲ್ಲಿ ತೆರಿಗೆ ಪ್ರಮಾಣವನ್ನು ಮರು ನಿಗದಿ ಮಾಡಿದ್ದರು.
ಕಹಿ ನಡುವೆಯೇ ಸಿಹಿ!: ಇಷ್ಟೆಲ್ಲ ಬೆಳವಣಿಗೆ ನಡುವೆ ವೆಚ್ಚಕ್ಕೆ ಕಡಿವಾಣ ಹಾಕಿರುವುದು ಮುಖ್ಯವಾಗಿ ಕಾಣಿಸುತ್ತಿದೆ. ಮಾಹಿತಿಗಳ ಪ್ರಕಾರ 2,50,993 ಕೋಟಿ ರೂ. ರಾಜಸ್ವ ವೆಚ್ಚ ಮಾಡಲು ಅವಕಾಶ ಮಾಡಿಕೊಳ್ಳಲಾಗಿತ್ತು. ಆದರೆ, ಆರ್ಥಿಕ ವರ್ಷದ ಕೊನೆಯಲ್ಲಿ 2,39,321 ಕೋಟಿ ರೂ. ಮಾತ್ರ ವೆಚ್ಚ ಮಾಡಿ ಹಣಕಾಸು ಇಲಾಖೆ ವೆಚ್ಚದ ಮೇಲೆ ಬಿಗಿ ಹಿಡಿತ ಸಾಧಿಸಿರುವುದು ಕಂಡುಬಂದಿದೆ. ಆಡಳಿತ ವೆಚ್ಚದಲ್ಲಿ ಎಲ್ಲೆಲ್ಲಿ ಕಡಿತ ಮಾಡಬಹುದೋ ಅಲ್ಲೆಲ್ಲ ಕೈ ಆಡಿಸಲಾಗಿದೆ. ಜತೆಗೆ ಖರೀದಿ ನಿಯಂತ್ರಿಸಿ ಬೇಕಾಬಿಟ್ಟಿ ವೆಚ್ಚಕ್ಕೆ ಮೂಗುದಾರ ಹಾಕಲಾಗಿದೆ. ಜತೆಗೆ ಬಂಡವಾಳ ವೆಚ್ಚ ಹೆಚ್ಚಿಗೆ ಮಾಡಿ ಅಭಿವೃದ್ಧಿ ಕಾರ್ಯ ನಿರಾತಂಕವಾಗಿ ನಡೆದಿದೆ ಎಂದು ಪ್ರಚುರಪಡಿಸಲಾಗಿದೆ. 54,374 ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿತ್ತು, 56,274 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಬೆಳೆಯುತ್ತಿದೆ ಸಾಲ: ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಇರುವ ಕಾರಣ ಸರ್ಕಾರ ತನ್ನ ಹಣಕಾಸು ವ್ಯವಸ್ಥೆಯನ್ನು ಭದ್ರಪಡಿಸಿಕೊಳ್ಳಲು ಹೆಚ್ಚುವರಿ ಸಾಲ ಮಾಡಿದೆ. ಅಂದರೆ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಕ್ಕಿಂತ ಹೆಚ್ಚು ಸಾಲ ಮಾಡಲಾಗಿದೆ. 2023-24ನೇ ಸಾಲಿನ ಬಜೆಟ್ನಲ್ಲಿ 85,818 ಕೋಟಿ ರೂ. ಸಾಲ ಮಾಡುವುದಾಗಿ ಪ್ರಸ್ತಾಪಿಸಲಾಗಿತ್ತು. ಅಂತಿಮವಾಗಿ -ಠಿ;90,218 ಕೋಟಿ ಸಾಲ ಮಾಡಲಾಗಿದೆ. ಬಂಡವಾಳ ವೆಚ್ಚಕ್ಕೆ ಇದನ್ನು ಬಳಸಲಾಗುತ್ತದೆ ಎಂಬುದು ಅಧಿಕಾರಿಗಳ ವಾದ.
ಕೇಂದ್ರದಿಂದ ಹೆಚ್ಚಾದ ತೆರಿಗೆ ಪಾಲು: ರಾಜ್ಯದಿಂದ ತೆರಿಗೆ ಪ್ರಮಾಣ ಹೆಚ್ಚು ಸಂಗ್ರಹವಾದ ಪರಿಣಾಮ ಬಜೆಟ್ನಲ್ಲಿ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿ ಕೇಂದ್ರದಿಂದ ತೆರಿಗೆ ಪಾಲು ಸಿಕ್ಕಿದೆ. ಬಜೆಟ್ನಲ್ಲಿ 37,252 ಕೋಟಿ ರೂ. ತೆರಿಗೆ ಪಾಲು ಬರಬಹುದೆಂದು ನಿರೀಕ್ಷೆ ಇತ್ತಾದರೂ, ಅಂತಿಮವಾಗಿ 40,280 ಕೋಟಿ ರೂ. ಬಂದಿದೆ.
ತೆರಿಗೆ ಗುರಿ, ಸಂಗ್ರಹ ಲೆಕ್ಕ
1. ವಾಣಿಜ್ಯ ತೆರಿಗೆ: 98,650 ಕೋಟಿ ರೂ. ನಿರೀಕ್ಷಿಸಲಾಗಿತ್ತು. 93,159 ಕೋಟಿ ರೂ.ಗೆ ಸೀಮಿತವಾಯಿತು. (2022-23ರಲ್ಲಿ ಸಂಗ್ರಹ 81,991 ಕೋಟಿ ರೂ.)
2. ಅಬಕಾರಿ ತೆರಿಗೆ: 36 ಸಾವಿರ ಕೋಟಿ ರೂ. ಸಂಗ್ರಹದ ಅಂದಾಜಿತ್ತು, 34,557 ಕೋಟಿ ರೂ. ಸಂಗ್ರಹವಾಯಿತು. (2022-23ರಲ್ಲಿ 29,920 ಕೋಟಿ ರೂ.)
3. ನೋಂದಣಿ ಮುದ್ರಾಂಕ: 25 ಸಾವಿರ ಕೋಟಿ ರೂ. ಬರುವ ನಿರೀಕ್ಷೆಯ ಪೈಕಿ 19,952 ಕೋಟಿ ರೂ. ಮಾತ್ರ ಬಂದಿದೆ. (2022-23ರಲ್ಲಿ 17,726 ಕೋಟಿ ರೂ.)
4. ವಾಹನ ತೆರಿಗೆ: 11,500 ಕೋಟಿ ರೂ. ನಿರೀಕ್ಷೆಯ ಪೈಕಿ 11,190 ಕೋಟಿ ರೂ. ಬಂದಿದ್ದು ಗುರಿಯ ಸನಿಹವಿದೆ. (2022-23ರಲ್ಲಿ 10,611 ಕೋಟಿ ರೂ.)
5. ಸಾಲ ವಸೂಲಾತಿ ಬಂಡವಾಳಗಳ ಮೇಲಿನ ಆದಾಯ ಋಣೇತರ ಬಂಡವಾಳ ಜಮೆ 250 ಕೋಟಿ ನಿರೀಕ್ಷೆ ಪೈಕಿ ರೂ. 135 ಕೋಟಿ ಮಾತ್ರ ಬಂದಿದೆ.
ಗುರಿ ಮುಟ್ಟದ್ದಕ್ಕೆ ನಾಲ್ಕು ಕಾರಣ
1. ಬರದಿಂದಾಗಿ ಆರ್ಥಿಕ ಚಟುವಟಿಕೆ ಮಂದಗತಿಯಲ್ಲಿ ಸಾಗಿದ್ದು
2. ತೆರಿಗೆ ಸಂಗ್ರಹದ ಪರಿಷ್ಕೃತ ಗುರಿಯೇ ಅವಾಸ್ತವಿಕವಾಗಿತ್ತು
3. ಹೊಸ ಸರ್ಕಾರಕ್ಕೆ ಆರ್ಥಿಕ ವರ್ಷದಲ್ಲಿ ಅವಕಾಶ ಸಿಕ್ಕಿದ್ದು ಎಂಟೇ ತಿಂಗಳು
4. ಗ್ಯಾರಂಟಿಯಿಂದಾಗಿ ಹೊಸ ಕಾಮಗಾರಿ ನಡೆಯದೆ ತೆರಿಗೆ ಸಂಗ್ರಹಕ್ಕೆ ಕೊಕ್ಕೆ
ಈಗ ಆಗಿರುವುದೇನು?
- 2023ರ ಏ.1ರಿಂದ 2024ರ ಮಾರ್ಚ್ ಅಂತ್ಯದವರೆಗೆ ನಿರಾಸೆ
- ಈ ಅವಧಿಯಲ್ಲಿ ಸರ್ಕಾರದ ಸ್ವಂತ ತೆರಿಗೆ ಸಂಗ್ರಹ ನಿರೀಕ್ಷೆ ಮುಟ್ಟಿಲ್ಲ
- ಅಬಕಾರಿ, ನೋಂದಣಿ-ಮುದ್ರಾಂಕ, ವಾಹನ ನೋಂದಣಿ ನಿರಾಸೆ
- ಈ ನಾಲ್ಕೂ ವಲಯದಲ್ಲೂ ತೆರಿಗೆ ಗುರಿ ನಿರೀಕ್ಷೆಯ ಮಟ್ಟ ತಲುಪಿಲ್ಲ
- ಕೋವಿಡ್ ವರ್ಷ ಬಿಟ್ಟು ಇತ್ತೀಚೆಗೆ ಇಂತಹ ಬೆಳವಣಿಗೆ ನಡೆದಿರಲಿಲ್ಲ
ಯಡಿಯೂರಪ್ಪ ಮಗನನ್ನು ಸೋಲಿಸಲು ಅಮಿತ್ ಷಾ ಆಶೀರ್ವಾದ ಸಿಕ್ಕಿದೆ: ಈಶ್ವರಪ್ಪ