

ನವದೆಹಲಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಗನನ್ನು ಸೋಲಿಸಲು ಅಮಿತ್ ಷಾ ಆಶೀರ್ವಾದ ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ರೋಚಕ ಹೇಳಿಕೆ ನೀಡಿದ್ದಾರೆ. ಇದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಮಾಜಿ ಸಚಿವ ಈಶ್ವರಪ್ಪ ಸದ್ಯದ ಮಟ್ಟಿಗೆ ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅಮಿತ್ ಷಾ ಭೇಟಿ ಆಗದೆ ಇರುವುದು ರೋಗಿ ಬಯಸಿದ್ದು ಹಾಲು ಅನ್ನ,ವೈದ್ಯ ಹೇಳಿದ್ದು ಹಾಲು ಅನ್ನ ಎಂದಂತಾಗಿದೆ. ಇವತ್ತು ಅಮಿತ್ ಷಾ ಅವರ ಭೇಟಿಯಾಗಿದ್ದಿದ್ದರೆ ಸ್ಪರ್ಧೆಯಿಂದ ಹಿಂದೆ ಸರಿಯಲು ಹೇಳುತ್ತಾರೆ ಎಂಬ ಭಯವಿತ್ತು. ಆದರೆ ಇಂದು ಅವರ ಭೇಟಿ ಆಗದೆ ಬರುವುದನ್ನು ನೋಡಿದರೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಸೋಲಿಸಲು ಅಣಿಯಾಗಿ ಎಂದು ಅವರು ನನ್ನನ್ನು ಆಶೀರ್ವದಿಸಿದಂತಿದೆ.
ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಈ ಹಿಂದೆ ವರಿಷ್ಟರು ಏನು ಹೇಳಿದರೋ ಅದನ್ನೆಲ್ಲ ಮಾಡಿದ್ದೇನೆ. ಈ ಸಲ ಅವರ ಮಾತನ್ನು ಉಲ್ಲಂಘಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದೆ. ಆದರೆ ನನ್ನ ಚಿಂತೆಯನ್ನು ಅಮಿತ್ ಷಾ ದೂರ ಮಾಡಿದ್ದಾರೆ. ರಾಘವೇಂದ್ರ ಅವರನ್ನು ಸೋಲಿಸಲು ಆಶೀರ್ವಾದ ಮಾಡಿದ್ದಾರೆ ಎಂಬುದು ನನ್ನ ನಂಬಿಕೆ ಎಂದು ಹೇಳಿದರು.
ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದಾಗ ಅಮಿತ್ ಷಾ ಅವರು ನನ್ನನ್ನು ಕರೆಸಿ ಇದನ್ನು ನಿಲ್ಲಿಸಿ ಎಂದರು.ಅವರ ಮಾತಿಗೆ ಗೌರವ ಕೊಟ್ಟು ನಾನು ನಿಲ್ಲಿಸಿದೆ. ಇದಾದ ನಂತರ ಮಂತ್ರಿಗಿರಿಗೆ ರಾಜೀನಾಮೆ ಕೊಡುವ ವಿಷಯ ಬಂದಾಗಲೂ ರಾಜೀನಾಮೆ ಕೊಡಿ ಎಂದರು. ಆಗಲೂ ಇದನ್ನು ಪಾಲಿಸಿದೆ. ಮೊನ್ನೆ ಫೋನು ಮಾಡಿ ದಿಲ್ಲಿಗೆ ಬನ್ನಿ, ಮಾತನಾಡಬೇಕು ಎಂದರು. ಅವರ ಮಾತಿಗೆ ಗೌರವ ನೀಡಿ ನಾನು ದೆಹಲಿಗೆ ಬಂದೆ.
ಆದರೆ ಇಂದು ನನ್ನ ಭೇಟಿಗೆ ಅವಕಾಶ ನೀಡಬೇಕಿದ್ದ ಅವರು ಭೇಟಿ ನೀಡಿಲ್ಲ. ಇದು ನನಗೆ ಅವರು ಮಾಡಿದ ಆಶೀರ್ವಾದ. ರಾಘವೇಂದ್ರ ಅವರನ್ನು ಸೋಲಿಸಿ ಎಂಬ ಇಂಗಿತ. ಹೀಗಾಗಿ ಇನ್ನಷ್ಟು ಉತ್ಸಾಹದಿಂದ ನಾನು ರಾಜ್ಯಕ್ಕೆ ಮರಳುತ್ತಿದ್ದೇನೆ.ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಣದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.