ಕಸಿನ್​ಗಳ ಮದುವೆ ಕಾನೂನು ಬಾಹಿರ; ಹರಿಯಾಣ, ಪಂಜಾಬ್​ ಹೈ ಕೋರ್ಟ್​ ಆದೇಶ

marriage
Published on

ಚಂಡೀಗಢ: ಒಂದೇ ಕುಟುಂಬದ ಸೋದರ ಸಂಬಂಧಿಗಳು (ಕಸಿನ್ಸ್​) ಮದುವೆಯಾಗುವುದು ಕಾನೂನು ಬಾಹಿರ ಎಂದು ಹರಿಯಾಣ ಮತ್ತು ಪಂಜಾಬ್​ ಹೈ ಕೋರ್ಟ್​ ಹೇಳಿದೆ. ತನ್ನ ಸೋದರ ಸಂಬಂಧಿ ಯುವತಿಯನ್ನು ಮದುವೆಯಾಗುವ ವಿಚಾರದಲ್ಲಿ ಹೈ ಕೋರ್ಟ್​ ಮೆಟ್ಟಿಲೇರಿದ್ದ 21 ವರ್ಷದ ಯುವಕನ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.

ಯುವಕನೋರ್ವ ತನ್ನ ಸೋದರ ಸಂಬಂಧಿಯೊಡನೆ ಲೀವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದಾನೆ. ಯುವತಿಯ ಅಪ್ಪ ಮತ್ತು ಯುವಕನ ಅಪ್ಪ ಇಬ್ಬರು ಅಣ್ಣ ತಮ್ಮಂದಿರು. ಯುವತಿಯ ಮನೆಯಲ್ಲಿ ಆಕೆಗಿಂತ ಆಕೆಯ ಸಹೋದರನನ್ನು ಕಂಡರೆ ಹೆಚ್ಚು ಪ್ರೀತಿಯಂತೆ. ಅದೇ ಕಾರಣದಿಂದ ಮನನೊಂದ ಯುವತಿ ಸೋದರ ಸಂಬಂಧಿಯೊಡನೆ ಲೀವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದಾಳೆ. ಆಕೆಗೆ 17 ವರ್ಷ ತುಂಬಿದ್ದು 18 ವರ್ಷ ತುಂಬಿದ ನಂತರ ತಾನು ಅವಳನ್ನು ಮದುವೆಯಾಗುತ್ತೇನೆ. ಅಲ್ಲಿಯವರೆಗೆ ನಮ್ಮ ಕುಟುಂಬದವರಿಂದ ನಮಗೆ ರಕ್ಷಣೆ ಕೊಡಿ ಎಂದು ಯುವಕ ಹೈ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾನೆ.

ಈ ವಿಚಾರವಾಗಿ ಎರಡು ಕುಟುಂಬಗಳೂ ನ್ಯಾಯಾಲಯದ ಮೆಟ್ಟಿಲೇರಿವೆ. ಇವರಿಬ್ಬರು ಮೊದಲ ಸೋದರ ಸಂಬಂಧಿಗಳು. ಆ ಕಾರಣ ಅವರಿಬ್ಬರ ಮದುವೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರು ದೂರಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಕುಟುಂಬಸ್ಥರ ಪರವಾಗಿ ತೀರ್ಪು ನೀಡಿದೆ. ಕಾನೂನಿನಲ್ಲಿ ಒಂದೇ ಕುಟುಂಬದ ಮೊದಲ ಸೋದರ ಸಂಬಂಧಿಗಳು (ಅಣ್ಣ ತಮ್ಮಂದಿರ ಮಕ್ಕಳು) ಮದುವೆಯಾಗುವುದಕ್ಕೆ ಅವಕಾಶವಿಲ್ಲ. ಅದು ಕಾನೂನು ಬಾಹಿರ. ಹಾಗಿದ್ದಾಗ ಲೀವ್​ ಇನ್​ ರಿಲೇಷನ್​ಶಿಪ್​ನಲ್ಲಿರುವುದು ಕೂಡ ತಪ್ಪಾಗುತ್ತದೆ. ಅದೂ ಅಲ್ಲದೆ ಯುವತಿಗೆ 18 ವರ್ಷ ತುಂಬದ ಕಾರಣ ಆಕೆಯನ್ನು ಅಪ್ರಾಪ್ತೆ ಎಂದು ಪರಿಗಣಿಸಲಾಗುತ್ತದೆ. ಅವಳ ಮದುವೆ ವಿಚಾರದಲ್ಲಿ ಅರ್ಜಿ ಸಲ್ಲಿಕೆ ಕೂಡ ಕಾನೂನು ಬಾಹಿರವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅರ್ಜಿಯಲ್ಲಿ ಯುವಕ ಯುವತಿ ತಾವು ಸೋದರ ಸಂಬಂಧಿಗಳು ಎನ್ನುವುದನ್ನು ನಮೂದಿಸಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net