ಅಮರನ್​ ಸಿನಿಮಾ ಇಷ್ಟೊಂದು ಲಾಭ ಮಾಡ್ತಾ? ಕಮಲ್​ ಹಾಸನ್ ಖಜಾನೆಗೆ ಹರಿದು ಬಂತು ಕೋಟಿಗಳ ರಾಶಿ! Amaran

Amaran
Published on

Amaran : ಕಾಲಿವುಡ್​ ಸೂಪರ್​ಸ್ಟಾರ್​ ಶಿವಕಾರ್ತಿಕೇಯನ್​ ಹಾಗೂ ಸರಳ ಸುಂದರಿ ಸಾಯಿ ಪಲ್ಲವಿ ನಟನೆಯ ಅಮರನ್​ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಕಡಿಮೆ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾ ಇಂದು 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡಿ ತಮಿಳು ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈಗಲೂ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಅಂದಹಾಗೆ ಅಮರನ್​ ಸಿನಿಮಾ ಅಕ್ಟೋಬರ್​ 14ರಂದು ಬಿಡುಗಡೆಯಾಯಿತು. ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡಿಸೆಂಬರ್​ 5ರಂದು ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದರೂ ಕೂಡ ಥಿಯೇಟರ್​ನಲ್ಲಿ 50 ದಿನ ಪೂರೈಸಲಿದೆ. ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಬಾಕ್ಸ್​ಆಫೀಸ್​ನಲ್ಲಿ ಸಖತ್ ಸದ್ದು ಮಾಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 44ನೇ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್‌ಗೆ ನಿಯೋಜನೆಗೊಂಡಾಗ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ತಮ್ಮ ಶೌರ್ಯಕ್ಕಾಗಿ ಮರಣೋತ್ತರ ಅಶೋಕ ಚಕ್ರವನ್ನು ಪಡೆದ ಮೇಜರ್ ಮುಕುಂದ್ ವರದರಾಜನ್ ಅವರ ನೈಜ-ಜೀವನದ ಕಥೆ ಇದಾಗಿದೆ. ರಾಜ್​ಕುಮಾರ್​ ಪೆರಿಸ್ವಾಮಿ ನಿರ್ದೇಶಿಸಿದ್ದು, ಕಮಲ್​ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿತು.

ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. 2024ರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿರುವ ಅಮರನ್ ಚಿತ್ರದಿಂದ ನಿರ್ಮಾಪಕರು ಗಳಿಸಿದ ಒಟ್ಟು ಕಲೆಕ್ಷನ್ ಮತ್ತು ಲಾಭದ ಬಗ್ಗೆ ಮಾಹಿತಿ ಬಿಡುಗಡೆಯಾಗಿದೆ.

ಅಮರನ್ ಚಿತ್ರದ ಬಜೆಟ್ 110 ಕೋಟಿ ರೂಪಾಯಿ. ಬಿಡುಗಡೆಗೂ ಮುನ್ನವೇ ಅಮರನ್​ ಸಿನಿಮಾ 117 ಕೋಟಿ ರೂ. ಗಳಿಸಿತು. ಅಂದರೆ, ಬಿಡುಗಡೆಗೂ ಮುಂಚೆಯೇ ನಿರ್ಮಾಪಕರಿಗೆ 7 ಕೋಟಿ ರೂ. ಲಾಭ ಸಿಕ್ಕಿತು. ಇನ್ನು ಸಿನಿಮಾ ಬಿಡುಗಡೆ ಬಳಿಕ ವಿಶ್ವಾದ್ಯಂತ 361 ಕೋಟಿ ರೂ. ಗಳಿಸಿತು. ಇದು ಲೈಫ್​ಟೈಮ್​ ಕಲೆಕ್ಷನ್​.

ಇನ್ನು ಈ ಸಿನಿಮಾದಿಂದ ರಾಜ್​ಕಮಲ್​ ಸಂಸ್ಥೆ ಗಳಿಸಿದ ಲಾಭ ಎಷ್ಟು ಎಂದು ನೋಡಿದರೆ, ಚಿತ್ರಮಂದಿರ ಹೊರಗಿನ ವ್ಯವಹಾರ 89 ಕೋಟಿ ರೂಪಾಯಿ. ಥಿಯೇಟರ್​ ಬಿಜಿನೆಸ್​ (ಪ್ರೀ ರಿಲೀಸ್​) 28 ಕೋಟಿ ರೂಪಾಯಿ. ಥಿಯೇಟರ್​ ಆದಾಯ (ಬಿಡುಗಡೆ ನಂತರ) 105 ಕೋಟಿ ರೂಪಾಯಿ. ಒಟ್ಟು 222.40 ಕೋಟಿ ರೂಪಾಯಿ ರಾಜ್​ಕಮಲ್​ ಕಂಪನಿಗೆ ಸಿಕ್ಕಿತು. ಚಿತ್ರದ ಬಜೆಟ್ 110 ಕೋಟಿ ರೂ. ಕಡಿತಗೊಳಿಸಿದರೆ, ರಾಜಕಮಲ್ ಕಂಪನಿ 112 ಕೋಟಿ ರೂ. ಲಾಭ ಗಳಿಸಿದೆ. ಈ ಮಾಹಿತಿಯನ್ನು ಖ್ಯಾತ ಪತ್ರಕರ್ತ ಬಿಸ್ಮಿ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net