Instagram Love : ಆನ್‌ಲೈನ್ ಮುಖಾಂತರ ಡೇಟಿಂಗ್ ಅಥವಾ ಪ್ರೀತಿ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಮೋಸ ಹೋಗುವ ಸಾಧ್ಯತೆಯೇ ಹೆಚ್ಚು. ಈ ಬಗ್ಗೆ ಪೊಲೀಸರು ಎಷ್ಟೇ ಮುನ್ನೆಚ್ಚರಿಕೆ ನೀಡಿದರು ಸಹ ಮತ್ತೆ ಮತ್ತೆ ಅಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.
ತಾಜಾ ಸಂಗತಿ ಏನೆಂದರೆ, ದುಬೈನಲ್ಲಿ ಕಾರ್ಮಿಕನಾಗಿರುವ ದೀಪಕ್ ಎಂಬ ಯುವಕ ಇತ್ತೀಚಗೆ ಇದೇ ರೀತಿಯ ವಂಚನೆಗೆ ಒಳಗಾಗಿದ್ದಾರೆ. ಪಂಜಾಬ್‌ನ ಮಂಡಿಯಾಲಿ ಗ್ರಾಮದವರಾದ ದೀಪಕ್ ಕೆಲ ದಿನಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ದೀಪಕ್ಗೆ ಇನ್ಸ್ಟಾಗ್ರಾಂನಲ್ಲಿ ಮನ್‌ಪ್ರೀತ್ ಕೌರ್ ಎಂಬ ಯುವತಿ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಿತು. ಮೂರು ವರ್ಷಗಳ ಕಾಲ ಆನ್ಲೈನ್ನಲ್ಲಿ ಪ್ರೀತಿಸಿದ ಇಬ್ಬರು ಕೊನೆಗೆ ಮದುವೆಯಾಗಲು ನಿರ್ಧರಿಸಿದರು.
ದೀಪಕ್ ಪ್ರಕಾರ, ಮನ್‌ಪ್ರೀತ್ ತಾನು ಫಿರೋಜ್‌ಪುರದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಳು. ಇಬ್ಬರೂ ಒಮ್ಮೆಯೂ ಪರಸ್ಪರ ಭೇಟಿಯಾಗಿರಲಿಲ್ಲ. ಡಿಸೆಂಬರ್ 6ಕ್ಕೆ ಮದುವೆ ಫಿಕ್ಸ್ ಆಗಿತ್ತು. ಮದುವೆಗೆ ಒಂದು ತಿಂಗಳ ಮುಂಚೆಯೇ ದೀಪಕ್ ಪಂಜಾಬ್ಗೆ ಬಂದಿದ್ದ. ಮದುವೆಯ ದಿನದಂದು ಜಲಂಧರ್ ಜಿಲ್ಲೆಯ ತಮ್ಮ ಗ್ರಾಮ ಮಂಡಿಯಾಲಿಯಿಂದ ಪ್ರೇಯಸಿ ಮನ್ಪ್ರೀತ್ಳ ಮೊಗಾ ನಗರಕ್ಕೆ 150 ಜನರೊಂದಿಗೆ ದೀಪಕ್ ಮೆರವಣಿಗೆ ಹೊರಟರು. ಕಾರುಗಳನ್ನು ಸುಂದರವಾಗಿ ಅಲಂಕರಿಸಲಾಗಿತ್ತು ಮತ್ತು ಅದ್ಧೂರಿ ಮದುವೆಗೆ ಸಕಲ ವ್ಯವಸ್ಥೆಯನ್ನು ಮಾಡಲಾಗಿತ್ತು.
ಮದುವೆಗೆ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿ ಮಂಟಪದ ವಿಳಾಸವನ್ನು ಮನ್‌ಪ್ರೀತ್ ನೀಡಿದ್ದಳು. ದೀಪಕ್ ಮತ್ತು ಆತನ ಕುಟುಂಬದವರು ಮದುವೆಗೆಂದು ಪಂಜಾಬ್‌ನಿಂದ ಮೊಗಾಕ್ಕೆ ಬಂದರು. ಆದರೆ, ಮನ್‌ಪ್ರೀತ್ ಹೇಳಿದ ಸ್ಥಳದಲ್ಲಿ ಯಾವುದೇ ಮದುವೆ ಮಂಟಪ ಇರಲಿಲ್ಲ. ಬಳಿಕ ದೀಪಕ್, ಮನ್‌ಪ್ರೀತ್‌ಗೆ ಕರೆ ಮಾಡಿದಾಗ, ಸಂಬಂಧಿಕರು ಬಂದು ನಿಮ್ಮನ್ನು ಮಂಟಪಕ್ಕೆ ಕರೆದುಕೊಂಡು ಬರುತ್ತಾರೆ ಎಂದು ಹೇಳಿದ್ದಾಳೆ. ಆದರೆ, ಸುಮಾರು 5 ಗಂಟೆ ಸಮಯ ಕಾದರೂ ಅವರನ್ನು ಕರೆದುಕೊಂಡು ಹೋಗಲು ಯಾರೂ ಬರಲಿಲ್ಲ.
ದೀಪಕ್ ಮತ್ತೆ ಮನ್‌ಪ್ರೀತ್‌ಗೆ ಕರೆ ಮಾಡಿದ್ದಾನೆ. ಆದರೆ, ಆಕೆ ಕೆಲ ಗಂಟೆಗಳ ಬಳಿಕ ಫೋನ್ ಸ್ವಿಚ್ ಆಫ್ ಮಾಡಿದಳು. ಕೊನೆಗೆ ಏನು ಮಾಡಬೇಕೆಂದು ತಿಳಿಯದ ದೀಪಕ್ ಮತ್ತು ಆತನ ಕುಟುಂಬದವರು ಸಮೀಪದ ಠಾಣೆಗೆ ತೆರಳಿ ದೂರು ದಾಖಲಿಸಿದರು. ಮದುವೆ ಖರ್ಚಿಗೆಂದು ಮನ್‌ಪ್ರೀತ್‌ಗೆ 50 ಸಾವಿರ ರೂಪಾಯಿ ನೀಡಿದ್ದಾಗಿ ದೀಪಕ್ ಹೇಳಿದ್ದಾರೆ.
ಮದುವೆಯ ಅಲಂಕಾರ, ಸಿಹಿತಿಂಡಿ, ಛಾಯಾಗ್ರಾಹಕನಿಗೆ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ ಎಂದು ದೀಪಕ್ ತಂದೆ ಪ್ರೇಮಚಂದ್ ಹೇಳಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಮನ್‌ಪ್ರೀತ್ ಅವರ ಫೋನ್ ಸಂಖ್ಯೆ ಮತ್ತು ಕರೆ ದಾಖಲೆಗಳನ್ನು ಆಧರಿಸಿ ಆಕೆಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. (ಏಜೆನ್ಸೀಸ್)
ಬೆಂಗಳೂರಿನ ಈ ಬೈಕ್ ಟ್ಯಾಕ್ಸಿ ಸವಾರನ 1 ತಿಂಗಳ ಸಂಪಾದನೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Bike Taxi