ಪುಷ್ಪ 2 ಚಿತ್ರದ ಕಲೆಕ್ಷನ್​ ಫೇಕ್​ ಅಂತೆ! ಹಾಗಾದರೆ ನಿಜವಾಗಿಯು ಗಳಿಸಿದ್ದೆಷ್ಟು? ವೈರಲ್​ ಆಗ್ತಿವೆ ಕಾಮೆಂಟ್ಸ್​ | Pushpa 2 Collections

Pushpa 2 Collections
Published on

Pushpa 2 Collections : ಐಕಾನ್​ ಸ್ಟಾರ್​ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಡಿ.05 ರಂದು ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಮೊದಲ ದಿನವೇ 294 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಈ ಚಿತ್ರ ಎರಡು ದಿನದಲ್ಲಿ ಒಟ್ಟು 449 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ.

ಪುಷ್ಪ 2 ಚಿತ್ರವು ಈಗಾಗಲೇ 500 ಕೋಟಿ ರೂ. ಒಟ್ಟು ಕಲೆಕ್ಷನ್ ಗಡಿಯನ್ನು ದಾಟಿದೆ ಎನ್ನಲಾಗುತ್ತಿದೆ. ಭಾನುವಾರದ ಕಲೆಕ್ಷನ್​ ಸೇರಿಸಿದರೆ 600 ಕೋಟಿ ರೂ. ಗಡಿ ದಾಟಲಿದೆ ಎಂದು ಕೆಲ ಸಿನಿ ಪಂಡಿತರು ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ ಪುಷ್ಪ ದಿ ರೂಲ್ ಸಿನಿಮಾದ ಕಲೆಕ್ಷನ್ ಫೇಕ್​ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಪುಷ್ಪ 2 ಚಿತ್ರದ ಕಲೆಕ್ಷನ್​ ವಿಚಾರದಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಸಿನಿಮಾ ಪ್ರಚಾರದ ದೃಷ್ಟಿಯಿಂದ ಫೇಕ್​ ಕಲೆಕ್ಷನ್​ ಹೇಳಲಾಗುತ್ತಿದೆ. ಸಿನಿಮಾ ಮೇಲಿನ ಕ್ರೇಜ್​ ಹುಟ್ಟು ಹಾಕಲು ನಕಲಿ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಆದರೆ, ಪುಷ್ಪ ಸಿನಿಮಾ ಅಷ್ಟೊಂದು ಕಲೆಕ್ಷನ್​ ಮಾಡಿಲ್ಲ. ಏಕೆಂದರೆ, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಾದ ಮಂಡಿಸಿದ್ದಾರೆ. ಆದರೆ, ಈ ವಾದವನ್ನು ಅಲ್ಲು ಅರ್ಜುನ್​ ಅಭಿಮಾನಿಗಳು ತಳ್ಳಿಹಾಕಿದ್ದು, ಪುಷ್ಪ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿರುವುದು ನಿಜವೆನ್ನುತ್ತಿದ್ದಾರೆ.

ಕೆಲ ಸಿನಿ ಪಂಡಿತರ ಪ್ರಕಾರ ಪುಷ್ಪ ದಿ ರೂಲ್ ಸಿನಿಮಾದ ಹಣ ಸಂಗ್ರಹ ಅಸಲಿ ಎನ್ನುತ್ತಿದ್ದಾರೆ. ಏಕೆಂದರೆ, ಈ ಚಿತ್ರಕ್ಕೆ ಉತ್ತರ ಭಾರತದಲ್ಲಿ ಒಳ್ಳೆಯ ಸ್ಪಂದನೆ ಸಿಗುತ್ತಿದ್ದು, ದಾಖಲೆಯ ಮಟ್ಟದಲ್ಲಿ ಕಲೆಕ್ಷನ್ ಆಗಿದೆ ಎನ್ನುತ್ತಿದ್ದಾರೆ. ಈ ಸಿನಿಮಾಗೆ ಟಿಕೆಟ್ ದರ ಹೆಚ್ಚು ಮಾಡಿರುವುದು ಕೂಡ ಪ್ರಭಾವ ಬೀರಿದೆ ಎಂಬ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಬರುತ್ತಿವೆ.

ಅಚ್ಚರಿಯ ಸಂಗತಿ ಏನೆಂದರೆ, ಪುಷ್ಪ 2 ಸಿನಿಮಾಗೆ ಆಂಧ್ರ ಪ್ರದೇಶದಲ್ಲಿ ಅಷ್ಟೊಂದು ಸ್ಪಂದನೆ ಸಿಕ್ಕಿಲ್ಲ. ತೆಲಂಗಾಣ ಮತ್ತು ಹಿಂದಿಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲೂ ಪುಷ್ಪಗೆ ಅಷ್ಟೊಂದು ಬೆಂಬಲ ಸಿಕ್ಕಿಲ್ಲ. ಇನ್ನು ಕೇರಳ ಮತ್ತು ತಮಿಳುನಾಡಿನಲ್ಲಿ ಒಂದು ಮಟ್ಟಿಗೆ ಪರವಾಗಿಲ್ಲ. ಆದರೆ, ಹೇಳಿಕೊಳ್ಳುವಷ್ಟು ಸ್ಪಂದನೆ ಸಿಕ್ಕಿಲ್ಲ. ಕೆಲವರಂತೂ ಚಿತ್ರದ ರನ್​ಟೈಮ್​ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಈ ಸಿನಿಮಾ 3 ಗಂಟೆ 18 ನಿಮಿಷ ಇದೆ.

ಇದೆಲ್ಲದರ ನಡುವೆ ಪುಷ್ಪ 3 ಕೂಡ ಬರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಚಿತ್ರ ಬಿಡುಗಡೆಯಾಗಲು ಕನಿಷ್ಠ 5 ವರ್ಷ ಬೇಕಾಗುತ್ತದೆ ಎನ್ನಲಾಗುತ್ತಿದೆ. ಅಂದಹಾಗೆ ಪುಷ್ಪ 2: ದಿ ರೂಲ್, 2021ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್‌ನ ಬಹು ನಿರೀಕ್ಷಿತ ಸಿನಿಮಾದ ಮುಂದಿನ ಭಾಗವಾಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ನಿನ್ನೆಯಿಂದ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net