

ಹೀಗೇ ನಡೆದು ಬರುತ್ತಿದ್ದಾಗ, ಒಂದು ಮನೆಯ ಬಾಗಿಲು ತೆಗೆದಿರುವುದು ಕಾಣುತ್ತದೆ. ಸೀದಾ ಬಾಗಿಲ ಬಳಿ ಹೋಗುತ್ತಾನೆ. ಮನೆಯ ಹುಡುಗ ತನ್ನದೇ ಲೋಕದಲ್ಲಿ ಮಗ್ನನಾಗಿರುತ್ತಾನೆ. ಇವನು ಸೀದಾ ಎದುರಿಗಿರುವ ರೂಮ್ಗೆ ಹೋಗಿ ಬಾಗಿಲು ಹಾಕಿಕೊಂಡು ಬಿಡುತ್ತಾನೆ. ಸ್ವಲ್ಪ ಹೊತ್ತಿನ ನಂತರ, ಮನೆಯವರಿಗೆ ಆ ರೂಮ್ನಲ್ಲಿ ಯಾರೋ ಇರುವ ಗುಮಾನಿಯಾಗುತ್ತದೆ. ಆಗುಂತಕನ ಆಗಮನದಿಂದ ಅವರಿಗೆ ಭಯವಾಗುತ್ತದೆ. ಅವನು ತಮ್ಮ ಮೇಲೆ ಎರಗಬಾರದು ಅಥವಾ ತಪ್ಪಿಸಿಕೊಳ್ಳಬಾರದು ಎಂದು ಹೊರಗಿನಿಂದ ರೂಮ್ನ ಬೀಗ ಹಾಕಿ ಬಿಡುತ್ತಾರೆ ...
ಅವರು ಬೀಗ ತೆಗೆಯುವವರೆಗೂ ಅವನೂ ಹೊರಬರುವಂತಿಲ್ಲ. ಇತ್ತ ಹೊರಗಿನವರೂ ನೆಮ್ಮದಿಯಾಗಿರುವಂತಿಲ್ಲ. ಸಹಾಯಕ್ಕೆ ಪೊಲೀಸರನ್ನು ಕರೆದರೆ, ಅವರಿಗೆ ಕರೊನಾ ಡ್ಯೂಟಿ. ಸಂಬಂಧಿಕರನ್ನು ಕರೆದರೆ ಲಾಕ್ಡೌನ್ನಿಂದ ಅವರು ಮೆನಯಿಂದ ಹೊರಬರುವಂತಿಲ್ಲ. ಸರಿ, ಮುಂದೇನು? ಉತ್ತರಕ್ಕಾಗಿ ನೀವು ಶ್ರೇಯಸ್ ಎಂಟರ್ಟೈನ್ಮೆಂಟ್ ATT (ಆಲ್ಟೈಮ್ ಥಿಯೇಟರ್)ನಲ್ಲಿ ಬಿಡುಗಡೆಯಾಗಿರುವ 'ದಿ ಪೇಂಟರ್' ಚಿತ್ರವನ್ನು ನೀವು ನೋಡಬೇಕು.
ಲಾಕ್ಡೌನ್ನಲ್ಲಿ ತಯಾರಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರ 'ದಿ ಪೇಂಟರ್', ಹೆಸರು ಕೇಳಿದರೆ ಇದೊಬ್ಬ ಪೇಂಟರ್ನ ಕಥೆ ಎಂದನಿಸಿದರೂ, ಅದಲ್ಲ. ಇದು ಲಾಕ್ಡೌನ್ನ ಕಥೆ. ಕರೊನಾ ಹಾವಳಿ ತಗ್ಗಿಸುವುದಕ್ಕೆ ಇಡೀ ದೇಶದಲ್ಲಿ ಲಾಕ್ಡೌನ್ ಘೋಷಣೆಯಾದಾಗ ಏನೆಲ್ಲಾ ಆಯಿತು ಮತ್ತು ಏನೆಲ್ಲಾ ಆಗಿರಬಹುದು ಎಂದು ಹೇಳುವ ಕಥೆ ಇದು. ಒಬ್ಬ ಆಗುಂತಕನ ಆಗಮನದಿಂದ ಒಂದು ಕುಟುಂಬದಲ್ಲಿ ಏನೆಲ್ಲಾ ತಲ್ಲಣಗಳಾಗುತ್ತವೆ ಎಂದು ಸಾರುವ ಕಥೆ ಈ ಚಿತ್ರದಲ್ಲಿದೆ.
ಈ ಥ್ರಿಲ್ಲರ್ ಕಥೆಯನ್ನು ಅಷ್ಟೇ ಥ್ರಿಲ್ಲಿಂಗ್ ಆಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ವೆಂಕಟ್ ಭಾರದ್ವಾಜ್. ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವುದಷ್ಟೇ ಅಲ್ಲ, ಚಿತ್ರದ ಪ್ರಮುಖ ಪಾತ್ರದಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರ ಟೇಕಾಫ್ ಆಗುವುದಕ್ಕೆ ಒಂದಿಷ್ಟು ಸಮಯ ಬೇಕು. ಆ ನಂತರ ಚಿತ್ರ ಮುಗಿಯುವುದು ಗೊತ್ತಾಗುವುದೇ ಇಲ್ಲ. ಇನ್ನು ಚಿತ್ರದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿವೆ. ಅದನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೆ, ವೆಂಕಟ್ ಅವರ ಪ್ರಯತ್ನ ಮತ್ತು ಪ್ರಯೋಗ ಖುಷಿಕೊಡಬಹುದು.
ಇನ್ನು ಆ ಸಣ್ಣ-ಪುಟ್ಟ ಪಾತ್ರಗಳ ಬಗ್ಗೆ ಹೇಳುವುದಾದರೆ, ಇದು ಕೆಲವೇ ಪಾತ್ರಧಾರಿಗಳ ಸುತ್ತುವ ಚಿತ್ರ. ಲೊಕೇಶನ್ಗಳು ಸಹ ಕಡಿಮೆಯೇ. ಅದರಲ್ಲೂ ಚಿತ್ರದ ಬಹಳಷ್ಟು ಭಾಗ ಒಂದೇ ಮನೆಯಲ್ಲಿ ಚಿತ್ರೀಕರಣವಾಗಿರುವುದು ವಿಶೇಷ. ಲಾಕ್ಡೌನ್ ಸಂದರ್ಭದಲ್ಲಿ ಚಿತ್ರೀಕರಣವಾಗಿರುವುದರಿಂದ, ಭವ್ಯ ಪರಿಸರ, ಶ್ರೀಮಂತಿಕೆ ಯಾವುದನ್ನೂ ನೋಡುವುದಕ್ಕೆ ಸಾಧ್ಯವಿಲ್ಲ. ಇನ್ನು ಇರುವ ಪರಿಕರಗಳಲ್ಲೇ ಚಿತ್ರ ರೂಪಿಸಲಾಗಿದೆ. ಹಾಗೆಯೇ ಇಲ್ಲಿನ ಕಲಾವಿದರ್ಯಾರೂ ವೃತ್ತಿಪರರಲ್ಲ. ಒಟ್ಟಾರೆ, ನೈಜ ಪರಿಸರದಲ್ಲಿ, ಚಿತ್ರವನ್ನು ಸಾಧ್ಯವಾದಷ್ಟು ನೈಜವಾಗಿ ಹಿಡಿಯುವ ಪ್ರಯತ್ನ ಮಾಡಲಾಗಿದೆ.
ಕನ್ನಡದಲ್ಲಿ ಈಗಾಗಲೇ ಹಲವು ಪ್ರಯೋಗಗಳಾಗಿವೆ. ಆ ಸಾಲಿಗೆ ಇನ್ನೊಂದು ಹೊಸ ಸೇರ್ಪಡೆ 'ದಿ ಪೈಂಟರ್'. ಚಿತ್ರಪ್ರದರ್ಶನ ರದ್ದಾಗಿರುವ ಈ ಸಮಯದಲ್ಲಿ, ಈ ಪ್ರಯೋಗವನ್ನು ಮನೆಯಲ್ಲೇ ಕೂತು ಸವಿಯಬಹುದು.