ನಮ್ಮಪ್ಪ ಯಾರಿಗೂ ಫೋನ್​ ಮಾಡಿ ಮಗಳಿಗೆ ಅವಕಾಶ ಕೊಡು ಅಂತ ಕೇಳ್ಲಿಲ್ಲ ...

Kangana - Sonakshi - Final
Published on

ಬಾಲಿವುಡ್​ನಲ್ಲಿ ಚಾಲ್ತಿಯಲ್ಲಿರುವ ನೆಪೋಟಿಸಂ ಕುರಿತಾಗಿ ಕಂಗನಾ ರಣಾವತ್​ ಹಲವರ ಕಾಲೆಳೆದಿದ್ದಾರೆ. ಕರಣ್ ಜೋಹರ್​, ಸೋನಾಕ್ಷಿ ಸಿನ್ಹಾ, ಆಲಿಯಾ ಭಟ್​ ಸೇರಿದಂತೆ ಹಲವರ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ.

ಆದರೆ, ಯಾರೊಬ್ಬರೂ ಇದುವರೆಗೂ ಕಂಗನಾಗೆ ಕೌಂಟರ್​ ಕೊಡುವುದಕ್ಕೆ ಹೋಗಿರಲಿಲ್ಲ. ತಾವಾಯಿತು, ತಮ್ಮ ಪಾಡಾಯಿತು ಎಂದು ಎಲ್ಲರೂ ಸುಮ್ಮನಿದ್ದುಬಿಟ್ಟಿದ್ದರು. ಆದರೆ, ಇದೀಗ ಸೋನಾಕ್ಷಿ ಸಿನ್ಹಾ ಮೊದಲ ಬಾರಿಗೆ ನೆಪೋಟಿಸಂ ವಿಷಯದಲ್ಲಿ ಕಂಗನಾಗೆ ಟಾಂಗ್​ ಕೊಟ್ಟಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನನಗೆ ಇದೆಲ್ಲಾ ಬಹಳ ವಿಚಿತ್ರ ಎಂದನಿಸುತ್ತದೆ. ಈ ನೆಪೋಟಿಸಂ ಚರ್ಚೆ ಶುರು ಮಾಡಿದವರು, ತಮ್ಮ ಕಂಪೆನಿಯ ಜವಾಬ್ದಾರಿಯನ್ನು ಅವರ ಸಹೋದರಿಗೆ ಕೊಟ್ಟಿದ್ದಾರೆ. ಹೊರಗಿನವರಿಗೆ ಅಂಥದ್ದೊಂದು ಅವಕಾಶವನ್ನು ಅವರು ಕೊಡಬಹುದಿತ್ತು. ಆದರೆ, ಸಹೋದರಿಗೆ ಕೊಟ್ಟಿದ್ದೇಕೆ?' ಎಂದು ಕಂಗನಾ ಹೆಸರನ್ನು ಹೇಳದೆಯೇ ಟಾಂಗ್​ ಕೊಟ್ಟಿದ್ದಾರೆ ಸೋನಾಕ್ಷಿ.

'ಇನ್ನು ನಾನು ಸಹ ನೆಪೋಟಿಸಂನಿಂದ ಚಿತ್ರರಂಗದಲ್ಲಿದ್ದೇನೆ ಎಂದು ಬಹಳ ದಿನಗಳಿಂದ ಚರ್ಚೆಯಾಗುತ್ತಿದೆ. ನಮ್ಮ ಕುಟುಂಬಕ್ಕೆ ಸಲ್ಮಾನ್​ ಖಾನ್​ ಅವರ ಕುಟುಂಬ ಚೆನ್ನಾಗಿ ಪರಿಚಯವಿತ್ತು. ಅವರು 'ದಬಾಂಗ್​' ಸಿನಿಮಾ ಶುರು ಮಾಡಿದಾಗ, ಒಂದು ಹೊಸ ಮುಖ ಹುಡುಕುತ್ತಿದ್ದರಂತೆ. ನನ್ನನ್ನು ನೋಡಿ, ಆ ರೋಲ್​ಗೆ ಫಿಟ್​ ಆಗುತ್ತೇನೆ ಎಂಬ ಕಾರಣಕ್ಕೆ ಅವಕಾಶ ಕೊಟ್ಟಿದ್ದಾರೆಯೇ ಹೊರತು, ನಮ್ಮಪ್ಪ ಯಾವತ್ತೂ ಯಾರಿಗೂ ಫೋನ್​ ಮಾಡಿ ನನಗೆ ಅವಕಾಶ ಕೊಡಿ ಎಂದು ಕೇಳಿಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ನೆಪೋಟಿಸಂ ಬಗ್ಗೆ ಮಾತನಾಡಿರುವ ಅವರು, 'ಅನವಶ್ಯಕವಾಗಿ ಅನನ್ಯ ಪಾಂಡೆ, ಆಲಿಯಾ ಭಟ್​, ಜಾಹ್ನವಿ ಕಪೂರ್​, ಸೋನಮ್​ ಕಪೂರ್​ ಅವರನ್ನು ಎಳೆದು ತರಲಾಗುತ್ತಿದೆ. ಇದರಿಂದ ಅವರ ಮನಸ್ಸಿನ ಮೇಲೆ ಅದೆಷ್ಟು ಘಾಸಿಯಾಗುತ್ತಿರಬಹುದು ಯೋಚನೆ ಮಾಡಿ. ಅವರು ಎಷ್ಟೇ ಸ್ಟ್ರಾಂಗ್​ ಆಗಿದ್ದರೂ, ಎಲ್ಲೋ ಒಂದು ಕಡೆ ನೋವಾಗದೇ ಇರುವುದಿಲ್ಲ. ಇಷ್ಟಕ್ಕೂ ಈ ಯಾವ ನಟಿಯರನ್ನೂ ಅವರ ಮನೆಯವರು ಪರಿಚಯಿಸಿಲ್ಲ. ಬೇರೆ ಯಾರೋ ಪರಿಚಯಿಸಿದ್ದಾರೆ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net