

ವಿಜಯಪುರ: ವಕ್ಫ್ನಿಂದ ಭೂ ಮಾಫಿಯಾದವರಿಗೆ ಅನುಕೂಲವಾಗಿದೆ. ದೇವರ ಹೆಸರಿನಲ್ಲಿ ಭೂ ದಂಧೆ ನಡೆದಿದೆ. ಹೀಗಾಗಿ ವಕ್ಫ್ನ ಅಧಿಕೃತ ಆಸ್ತಿ ರಕ್ಷಣೆಯಾಗಬೇಕು ಮತ್ತು ಅತಿಕ್ರಮಣ ನಿಲ್ಲಬೇಕೆಂಬ ಕಾರಣಕ್ಕೆ ( Waqf Board) ಈ ಹಿಂದೆ ಸಂಸತ್ನಲ್ಲಿ ಪ್ರಶ್ನೆ ಮಾಡಿದ್ದು ನಿಜ. ಇದೀಗ ಆ ಪ್ರಶ್ನೆಯ ಪ್ರತಿಯನ್ನೇ ಕಾಂಗ್ರೆಸ್ನವರು ಬಿಡುಗಡೆ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
"ಸಂಸತ್ನಲ್ಲಿ ವಕ್ಫ್ ಆಸ್ತಿ ಹಿತರಕ್ಷಣೆಯ ನಿಟ್ಟಿನಲ್ಲಿ ಪ್ರಶ್ನೆ ಮಾಡಿದ ಕುರಿತು ಕಾಂಗ್ರೆಸ್ನವರು ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಸಚಿವೆ, ಕಾಂಗ್ರೆಸ್ನವರು ಹೇಳಿದ್ದು ಸತ್ಯ. ಅದಕ್ಕೆ ಸ್ವಾಗತವಿದೆ. ಈಗಲೂ ಆ ಪ್ರಶ್ನೆಗೆ ಬದ್ಧವಾಗಿದ್ದು, ನಿಜವಾದ ಆಸ್ತಿ ರಕ್ಷಣೆ ಆಗಬೇಕೆಂಬುದೇ ನಮ್ಮ ಉದ್ದೇಶ" ಎಂದು ತಿಳಿಸಿದರು.
"ಅನ್ವರ್ ಮಾನಿಪ್ಪಾಡಿ ವರದಿ ಬಂದಾಗಿನಿಂದ ಈವರೆಗೆ ನಾವು ಅದನ್ನೇ ಹೇಳುತ್ತಿದ್ದೇವೆ. ಆ ಸಮಿತಿಯ ವರದಿ ಸಿಬಿಐಗೆ ಒಪ್ಪಿಸಬೇಕು. ಯಾಕೆ? ಕಾಂಗ್ರೆಸ್ನವರು 29 ಸಾವಿರ ಎಕರೆ ಜಮೀನು ನುಂಗಿ ನೀರು ಕುಡಿದಿದ್ದಾರೆ. ಅಲ್ಲಾನ ಹೆಸರಲ್ಲಿಯೇ ಅಲ್ಲಾನ ಆಸ್ತಿ ದೋಖಾ ಆಗಿದೆ. ಇದನ್ನು ರಕ್ಷಿಸಬೇಕಾದವರು ಯಾರು? ಖಮರುಲ್ ಇಸ್ಲಾಂ, ಹ್ಯಾರೀಸ್, ರೋಷನ್ಬೇಗ್ ಇವರೆಲ್ಲ ಯಾರು? ಅದೇ ಜಾತಿಯಲ್ಲಿ ಹುಟ್ಟಿ, ಅಲ್ಲಾನ ಹೆಸರಲ್ಲಿ ಅಲ್ಲಾಗೆ ಮೋಸ ಮಾಡುವವರು. ಇದನ್ನೇ ನಾನು ಪ್ರಶ್ನೆ ಮಾಡಿದ್ದೇನೆ. ಈಗಲೂ ಅದನ್ನೇ ಪ್ರಶ್ನೆ ಮಾಡುವೆ" ಎಂದು ಗರಂ ಆಗಿ ನುಡಿದರು.
ಇದನ್ನೂ ಓದಿ: ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಿ
"ದೇಶದಲ್ಲಿ ವಕ್ಫ್ಗೆ ದಾನ ಕೊಟ್ಟ ಜಮೀನು ಎಷ್ಟು? ಆ ಜಮೀನು ಅತಿಕ್ರಮಿಸಿದ್ದು ಯಾರು? ಎಂದರಲ್ಲದೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಜಂಟಿ ಸಂಸತ್ ಸಮಿತಿ ರಚಿಸಲಾಗಿದೆ ಎಂದರು. ವಕ್ಫ್ ಆಸ್ತಿಗಳ ವ್ಯಾಜ್ಯವನ್ನು ನ್ಯಾಯಾಲಯದಲ್ಲೂ ಪ್ರಶ್ನೆ ಮಾಡುವಂತಿಲ್ಲ. ಕಾಂಗ್ರೆಸ್ನವರು 1995ರಲ್ಲಿ ಇಂಥ ಕಾನೂನು ಮಾಡಿದರು. ಬ್ರಿಟಿಷರು ಸಹ ಇಂಥ ಕಾನೂನು ಮಾಡಿರಲಿಲ್ಲ. ಬ್ರಿಟಿಷರ ಅವಧಿಯಲ್ಲಿ ನಮ್ಮ ಆಸ್ತಿಗಳ ವ್ಯಾಜ್ಯವನ್ನು ಸಿವಿಲ್ ಕೋರ್ಟ್ನಲ್ಲಿ ಪ್ರಶ್ನೆ ಮಾಡುವ ಹಕ್ಕಿತ್ತು. ಆದರೆ, ವಕ್ಫ್ ಕಾಯ್ದೆಯಲ್ಲಿ ಆ ಹಕ್ಕು ಇಲ್ಲ. ಹೀಗಾಗಿ ಈ ಎಲ್ಲ ಸಮಸ್ಯೆಗಳಿಗೆ ವಕ್ಫ್ ಆಸ್ತಿಯ ರಾಷ್ಟ್ರೀಕರಣವೊಂದೇ ಪರಿಹಾರ. ಅದಕ್ಕಾಗಿಯೇ ಜಂಟಿ ಸಂಸತ್ ಸಮಿತಿ ರಚಿಸಲಾಗಿದ್ದು, ಶೀಘ್ರದಲ್ಲಿಯೇ ಕಾಯ್ದೆಗೆ ತಿದ್ದುಪಡಿಯಾಗಲಿದೆ" ಎಂದು ಹೇಳಿದರು.
"ಬೆಳಗಾವಿಯ ಎಫ್ಡಿಎ ರುದ್ರಣ್ಣ ಯಡವಣ್ಣನವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ಕೂಡಲೇ ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ನೀಡುವಂತೆ ಆಗ್ರಹಿಸಿದರು. ಈ ಹಿಂದೆ ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಂಡ ಕಾರಣ ಮುಡಾ ಪ್ರಕರಣ ಹೊರಬಿತ್ತು. ಇದೀಗ ರುದ್ರಣ್ಣ ಆತ್ಮಹತ್ಯೆ ಮೂಲಕ ಲಕ್ಷ್ಮಿ ಭ್ರಷ್ಟಾಚಾರ ಬಯಲಾಗಿದೆ. ಸಚಿವೆ ಬೆಳಗಾವಿಯಲ್ಲಿ, ಉಡುಪಿಯಲ್ಲಿ, ಬೆಂಗಳೂರಲ್ಲಿ ಪರ್ಸೆಂಟೇಜ್ ಅಂಗಡಿ ತೆಗೆದಿದ್ದಾರೆ. ರುದ್ರಣ್ಣ ಡೆತ್ನೋಟ್ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಹೆಸರು ನಮೂದಿಸಿದ್ದಾರೆ. ಹೀಗಾಗಿ ತಕ್ಷಣ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು. ಆಗ ಅವರ ಭ್ರಷ್ಟಾಚಾರ ಬಯಲಾಗಲಿದೆ" ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.