

ಲಂಡನ್: ಈ ವರ್ಷದ ಕ್ರಿಕೆಟ್ ಋತು ಸಂಪೂರ್ಣವಾಗಿ ನಡೆಯದೇ ಹೋದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಬರೋಬ್ಬರಿ 3,584 ಕೋಟಿ ರೂ. (380 ದಶಲಕ್ಷ ಪೌಂಡ್) ನಷ್ಟವಾಗಲಿದೆ ಎಂದು ಇಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಾಮ್ ಹ್ಯಾರಿಸ್ ಹೇಳಿದ್ದಾರೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಒಟ್ಟು ಸೇರಿಸಿ ಈ ನಷ್ಟವನ್ನು ಲೆಕ್ಕ ಹಾಕಲಾಗಿದೆ. ಇಂಗ್ಲೆಂಡ್ನಲ್ಲಿ ಸದ್ಯ ಜುಲೈ 1ರವರೆಗೆ ಕ್ರಿಕೆಟ್ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಇಂಗ್ಲೆಂಡ್ನಲ್ಲಿ ಸಾಮಾನ್ಯ ವಾಗಿ ಏಪ್ರಿಲ್ನಲ್ಲಿ ಕ್ರಿಕೆಟ್ ಟೂರ್ನಿಗಳು ಶುರುವಾಗುತ್ತವೆ. ಈ ವರ್ಷ ಅದೇ ಸಮಯದಲ್ಲಿ ಕರೊನಾ ಹಾವಳಿ ಆರಂಭವಾಗಿತ್ತು. ಸಂಪೂರ್ಣ ಕ್ರಿಕೆಟ್ ಋತು ರದ್ದುಗೊಂಡರೆ, ಎಲ್ಲ ತಂಡಗಳಿಂದ ಒಟ್ಟು 800 ದಿನಗಳಷ್ಟು ಕ್ರಿಕೆಟ್ ಆಟ ನಷ್ಟವಾಗುತ್ತದೆ. ಇದು ನಮಗೆ ಎದುರಾಗಿರುವ ಅತಿದೊಡ್ಡ ಆರ್ಥಿಕ ಸವಾಲು. ಈಗಾಗಲೆ 944 ಕೋಟಿ ರೂ. ನಷ್ಟವಾಗಿದೆ ಎಂದು ಹ್ಯಾರಿಸ್ ತಿಳಿಸಿದ್ದಾರೆ.
ದಿ ಹಂಡ್ರೆಡ್ ಆಟಗಾರರ ಗುತ್ತಿಗೆ ರದ್ದು: ಮಹತ್ವಾಕಾಂಕ್ಷೆಯ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರ ಗುತ್ತಿಗೆಯನ್ನು ಇಸಿಬಿ ರದ್ದುಗೊಳಿಸಿದೆ. ತಲಾ 100 ಎಸೆತಗಳ ಇನಿಂಗ್ಸ್ನ ವಿನೂತನ ಟೂರ್ನಿ ಕೋವಿಡ್-19ರಿಂದಾಗಿ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಅಕ್ಟೋಬರ್ನಲ್ಲಿ ಡ್ರಾಫ್ಟ್ ಪದ್ಧತಿಯ ಮೂಲಕ 8 ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಈ ಎಲ್ಲ ಆಟಗಾರರ ಗುತ್ತಿಗೆಯನ್ನು ಟರ್ವಿುನೇಟ್ ಮಾಡಲಾಗಿದೆ.