ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಇ-ಮೇಲ್ ಮೂಲಕ ಅರ್ಜಿ ಆಹ್ವಾನ

NationalSports Award 5 MAY 20
Published on

ನವದೆಹಲಿ: ದೇಶಾದ್ಯಂತ COVID-19 ಸಾಂಕ್ರಾಮಿಕ ರೋಗ ತಡೆಯುವ ಉದ್ದೇಶದ ಲಾಕ್​ಡೌನ್ ಚಾಲ್ತಿಯಲ್ಲಿ ಇರುವ ಕಾರಣ ರಾಷ್ಟ್ರೀಯ ಕ್ರೀಡಾ ಪುರಸ್ಕಾರಗಳಿಗೆ ಇ-ಮೇಲ್ ಮೂಲಕ ಅರ್ಜಿ ಆಹ್ವಾನಿಸಿರುವುದಾಗಿ ಕ್ರೀಡಾ ಸಚಿವಾಲಯ ಮಂಗಳವಾರ ತಿಳಿಸಿದೆ.ರಾಜೀವ್​ ಗಾಂಧಿ ಖೇಲ್ ರತ್ನ ಸೇರಿ ಹಲವು ಪ್ರತಿಷ್ಠಿತ ಪುರಸ್ಕಾರಗಳು ಇದರಲ್ಲಿ ಒಳಗೊಂಡಿವೆ ಎಂದು ಅದು ಸ್ಪಷ್ಟಪಡಿಸಿದೆ.

ಸಾಮಾನ್ಯವಾಗಿ ರಾಷ್ಟ್ರೀಯ ಕ್ರೀಡಾ ಪುರಸ್ಕಾರಗಳಿಗೆ ಆಯ್ಕೆ ಪ್ರಕ್ರಿಯೆ ಏಪ್ರಿಲ್​ ತಿಂಗಳಲ್ಲಿ ಆರಂಭವಾಗುತ್ತದೆ. ಕೋವಿಡ್ 19 ಕಾರಣ ಈ ಪ್ರಕ್ರಿಯೆ ಈಗ ಈ ತಿಂಗಳ ತನಕ ಮುಂದೂಡಲ್ಪಟ್ಟಿದೆ. ಮೂರನೇ ಅವಧಿಯ ಲಾಕ್​ಡೌನ್ ಮೇ 17ಕ್ಕೆ ಮುಕ್ತಾಯವಾಗಲಿದ್ದು, ಅಷ್ಟರೊಳಗೆ ಈ ಪ್ರಕ್ರಿಯೆ ಶುರುವಾಗುವುದರಿಂದ ಉಳಿದ ಕೆಲಸಗಳು ಸುಲಲಿತವಾಗಿ ನಡೆಯಲಿದೆ. ಈ ಪುರಸ್ಕಾರಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಜೂನ್​ 3 ಕೊನೇ ದಿನವಾಗಿದೆ. ಈ ದಿನಾಂಕದ ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಸಚಿವಾಲಯದ ಸುತ್ತೋಲೆ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಪುರಸ್ಕಾರಗಳ ಪೈಕಿ ಅರ್ಜುನ ಪ್ರಶಸ್ತಿ, ಖೇಲ್ ರತ್ನಗಳೂ ಒಳಗೊಂಡಿದ್ದು, ಇವು ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಗಳಾಗಿವೆ. ದ್ರೋಣಾಚಾರ್ಯ ಪ್ರಶಸ್ತಿ ತರಬೇತುದಾರರಿಗೆ ಮೀಸಲಾಗಿದ್ದು, ಧ್ಯಾನ್​ಚಂದ್​ ಪ್ರಶಸ್ತಿ ಜೀವಮಾನದ ಸಾಧನೆಗೆ ಮೀಸಲಾಗಿದ್ದು ಅತ್ಯುತ್ತಮ ಸಾಧಕರಿಗೆ ಈ ಗೌರವ ಪ್ರಾಪ್ತಿಯಾಗಲಿದೆ.ಈ ವರ್ಷದ ಪ್ರಶಸ್ತಿಗೆ 2016ರ ಜನವರಿಯಿಂದ 2019ರ ಡಿಸೆಂಬರ್ ನಡುವಿನ ಅವಧಿಯ ಸಾಧನೆಯನ್ನು ಪರಿಗಣಿಸಲಾಗುತ್ತದೆ.ಖೇಲ್ ರತ್ನ ಪ್ರಶಸ್ತಿ 7.5 ಲಕ್ಷ ರೂಪಾಯಿ ನಗದು ಹೊಂದಿದ್ದು, ಅರ್ಜುನ ಪ್ರಶಸ್ತಿ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹೊಂದಿದೆ. ಕಳೆದ ವರ್ಷ ಖೇಲ್​ ರತ್ನ ಪ್ರಶಸ್ತಿ ಪ್ಯಾರಾಲಿಂಪಿಯನ್ ದೀಪಾ ಮಲಿಕ್​ ಮತ್ತು ಸ್ಟಾರ್ ರೆಸ್ಲರ್​ ಬಜರಂಗ್ ಪುನಿಯಾ ಅವರಿಗೆ ಒಲಿದಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net