

ನವದೆಹಲಿ: ಲಾಕ್ಡೌನ್ ಅವಧಿಯಲ್ಲಿ ಅಗತ್ಯ ಔಷಧಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯನ್ನು ಜನೌಷಧಿ ಕೇಂದ್ರಗಳೂ ಅಳವಡಿಸಿಕೊಂಡಿವೆ. ವಾಟ್ಸ್ಆ್ಯಪ್, ಇ-ಮೇಲ್ ಮೂಲಕವೂ ಆರ್ಡರ್ ಪಡೆದು ಗ್ರಾಹಕರಿಗೆ ತಲುಪಿಸವ ಕೆಲಸವನ್ನು ಜನೌಷಧಿ ಕೇಂದ್ರಗಳು ಮಾಡುತ್ತಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
ಪ್ರಸ್ತುತ ದೇಶಾದ್ಯಂತ 726 ಜಿಲ್ಲೆಗಳಲ್ಲಿ 6,300ಕ್ಕೂ ಹೆಚ್ಚು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ (ಪಿಎಂಬಿಜೆಕೆ)ಗಳು ಕಾರ್ಯಾಚರಿಸುತ್ತಿವೆ. ಜನರಿಗೆ ಅಗತ್ಯ ಔಷಧಗಳು ಕಡಿಮೆ ಬೆಲೆಗೆ ಪೂರೈಸುವುದನ್ನು ಈ ಕೇಂದ್ರಗಳು ಖಾತರಿಗೊಳಿಸುತ್ತಿವೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.
ಕೇಂದ್ರ ರಸಗೊಬ್ಬರ ಸಚಿವ ಸದಾನಂದ ಗೌಡ ಈ ಕುರಿತು ಪ್ರತಿಕ್ರಿಯಿಸಿದ್ದು, ಜನೌಷಧಿ ಕೇಂದ್ರಗಳು ಆಧುನಿಕ ಸಂವಹನದ ಟೂಲ್ರಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ವಾಟ್ಸ್ಆ್ಯಪ್ ಮುಂತಾದ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳನ್ನು ಅದು ಬಳಸಿಕೊಂಡು ಜನರ ಅಗತ್ಯಗಳನ್ನು ಪೂರೈಸುತ್ತಿದೆ. ಇದು ಹೃದ್ಯ ವಿಚಾರ ಎಂದು ಹೇಳಿಕೊಂಡಿದ್ದಾರೆ.
ಕಳೆದ ಒಂದೇ ತಿಂಗಳಲ್ಲಿ ಅಂದರೆ ಏಪ್ರಿಲ್ನಲ್ಲಿ ದೇಶಾದ್ಯಂತ ಜನೌಷಧಿ ಕೇಂದ್ರಗಳಿಗೆ ಒಟ್ಟು ಸುಮಾರು 52 ಕೋಟಿ ರೂಪಾಯಿ ಮೌಲ್ಯದ ಔಷಧಗಳನ್ನು ಪೂರೈಸಲಾಗಿದೆ. ಭಾರತೀಯ ಅಂಚೆಯೂ ಔಷಧಗಳನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ಜನೌಷಧಿ ಕೇಂದ್ರಗಳ ಜತೆಗೆ ಕೈ ಜೋಡಿಸಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)