ಲೇಸ್​ ಬ್ರಾ ಆಕಾರದ ಫೇಸ್​ಮಾಸ್ಕ್​ಗಳಿಗೆ ಜಪಾನಿನಲ್ಲಿ ಭಾರಿ ಬೇಡಿಕೆ- ಮಾರುಕಟ್ಟೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಟಾಕ್ ಖಾಲಿ!

Face mask Atsumi fashions
Published on

ಟೋಕಿಯೋ: ಸಂಕಷ್ಟದಲ್ಲೂ ವ್ಯಾಪಾರ ಮಾಡುವುದಕ್ಕೆ ಕ್ರಿಯೇಟಿವಿಟಿ ಬೇಕೇ ಬೇಕು. ಅದಕ್ಕೆ ಇದೊಂದು ಉದಾಹರಣೆ. ಜಪಾನ್​ನ ಈ ಫೇಸ್​ ಮಾಸ್ಕ್​ ಬಿಡುಗಡೆಯಾದ ಕೆಲವೇ ಕೆಲವು ನಿಮಿಷಗಳಲ್ಲಿ ಖಾಲಿಯಾಗಿವೆಯಂತೆ. ಇದಕ್ಕೆ ಸಂಬಂಧಿಸಿದ ಟ್ವಿಟರ್​ ಖಾತೆಯಲ್ಲಿ ಅಮೆರಿಕದಿಂದಲೂ ಬೇಡಿಕೆ ವ್ಯಕ್ತವಾಗಿರುವುದು ಕಂಡುಬಂದಿದೆ.

ಫೇಸ್ ಮಾಸ್ಕ್​ನ ಆಕಾರ ನೋಡಿಯೇ ಅನೇಕರು ಮರುಳಾಗಿದ್ದಾರಂತೆ!. ಅದಕ್ಕೆ ಉಪಯೋಗಿಸಿದ ಬಟ್ಟೆ ಕೂಡ ನೀವು ಅಂದುಕೊಂಡದ್ದಕ್ಕೇ ಬಳಸುವ ಬಟ್ಟೆಯೇ ಆಗಿದೆ. ಹಾಗಾಗಿಯೇ ಅದಕ್ಕೆ ಅಷ್ಟೊಂದು ಬೇಡಿಕೆ. ಜಪಾನ್​ನ ಅಟ್ಸುಮಿ ಫ್ಯಾಷನ್​ ಇದನ್ನು ಸಿದ್ಧಪಡಿಸಿ ಮಾರ್ಕೆಟಿಂಗ್ ಮಾಡುತ್ತಿದೆ. ಹಿಮಿ ನಗರದ ಅಟ್ಸುಮಿ ಫ್ಯಾಷನ್​ ಅಲ್ಲಿ ಮಹಿಳೆಯರ ಅಂಡರ್​ ಗಾರ್ಮೆಂಟ್​ಗೆ ಹೆಸರುವಾಸಿ.

ಲೇಸ್​ ಬ್ರಾ ಫೇಸ್​ ಮಾಸ್ಕ್​ನ ಚಿಂತನೆ ರೂಪುಗೊಂಡಾಗ ಅಲ್ಲಿನ ಗ್ರಾಹಕರು ಹೇಗೆ ಸ್ವೀಕರಿಸುವರೆಂಬ ಭಯ ಕಂಪನಿಗೆ ಇತ್ತಂತೆ. ಹೀಗಾಗಿ ಟೆಲಿವಿಷನ್ ಸೆಲೆಬ್ರಿಟಿ ಅಯಾ ಕೊಂಡೊ ಪ್ರೊಟೊ ಟೈಪ್​ ಫೇಸ್​ ಮಾಸ್ಕ್​ ಧರಿಸಿರುವ ಫೋಟೊವನ್ನು ಕಂಪನಿ ಆನ್​ಲೈನ್​ನಲ್ಲಿ ಶೇರ್ ಮಾಡಿಕೊಂಡಿತ್ತು. ಗ್ರಾಹಕರ ಪ್ರತಿಕ್ರಿಯೆ ನೋಡಿ ಬೆಚ್ಚಿ ಬೀಳುವ ಸರದಿ ಕಂಪನಿಯದ್ದಾಗಿತ್ತು.

ಕಳೆದ ಶನಿವಾರ ಅಟ್ಸುಮಿ ಫ್ಯಾಷನ್ ಲೇಸ್ ಬ್ರಾ ಫೇಸ್​ಮಾಸ್ಕ್​ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇದಕ್ಕೆ ಮಿಡ್​ ರೇಂಜ್​ ಜಪಾನೀಸ್ ಬ್ರಾದ ದರದ ಶೇಕಡ 50 ಕಡಿಮೆ ದರ. ಆದಾಗ್ಯೂ ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ 1,100 ರೂಪಾಯಿ. ಆರಂಭಿಕ ಹಂತವಾದ ಕಾರಣ ಕಂಪನಿಗೆ ಬೇಡಿಕೆಯನ್ನು ಒಮ್ಮೆಲೇ ಪೂರೈಸಲಾಗಲಿಲ್ಲ. ಬಿಳಿ, ಪಿಂಕ್​, ಲೈಮ್​, ಅಕ್ವಾ ಬ್ಲೂ, ಕಪ್ಪು ಬಣ್ಣಗಳ ತಲಾ 50 ಫೇಸ್​ ಮಾಸ್ಕ್​ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಟ್ಟಿತ್ತು. ಅದು ಕೆಲವೇ ನಿಮಿಷಗಳಲ್ಲಿ ಖಾಲಿಯಾಗಿ ಬಿಟ್ಟವು. ಈಗ ಫೇಸ್ ಮಾಸ್ಕ್​ ಸಿದ್ಧಪಡಿಸುವ ಪ್ರಮಾಣವನ್ನು ಕಂಪನಿ ಹೆಚ್ಚಿಸಿದ್ದು, ಗ್ರಾಹಕರ ಬೇಡಿಕೆ ಈಡೇರಿಸಲು ಮುಂದಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net