ಯುವರಾಜ್​ ಸಿಂಗ್​ ಬೆನ್ನಿಗೆ ಇರಿದರೇ ಎಂ.ಎಸ್​. ಧೋನಿ, ವಿರಾಟ್​ ಕೊಹ್ಲಿ?

yuvi
Published on

ನವದೆಹಲಿ: ಮಹೇಂದ್ರ ಸಿಂಗ್​ ಧೋನಿ ಭಾರತ ಕಂಡ ಅತ್ಯುತ್ತಮ ಹಾಗೂ ಯಶಸ್ವಿ ನಾಯಕರಲ್ಲಿ ಒಬ್ಬರು. ಇದೀಗ ಟೀಂ ಇಂಡಿಯಾದ ಸಾರಥ್ಯ ವಹಿಸಿರುವ ವಿರಾಟ್​ ಕೊಹ್ಲಿ ಕೂಡ ಇದೇ ಹೆಗ್ಗಳಿಕೆಯನ್ನು ಹೊಂದುವ ದಾರಿಯಲ್ಲಿ ಸಾಗುತ್ತಿದೆ. ಇಂಥವರು ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​ ಅವರ ಬೆನ್ನಿಗೆ ಇರಿದರೇ?

ಹೌದು ಎಂದು ಹೇಳುತ್ತಾರೆ ಯುವರಾಜ್​ ಸಿಂಗ್​ ಅವರ ತಂದೆ ಯೋಗರಾಜ್​ ಸಿಂಗ್​. ಟೀಂ ಇಂಡಿಯಾದ ನಾಯಕರಾಗಿ ಎಂ.ಎಸ್​. ಧೋನಿ ಮತ್ತು ವಿರಾಟ್​ ಕೊಹ್ಲಿ ಅವರು ಯುವರಾಜ್​ಗೆ ಅಗತ್ಯವಾದ ಸಂದರ್ಭದಲ್ಲಿ ಬೆಂಬಲ ನೀಡದೆ ಹೋದರು ಎಂದು ಆರೋಪಿಸಿದ್ದಾರೆ.

ಯುವಿ ಬೆನ್ನಿಗೆ ಇರಿದಿದ್ದು ಇವರಿಬ್ಬರಷ್ಟೇ ಅಲ್ಲ. ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ಸದಸ್ಯರು ಕೂಡ ಅವರ ಬೆನ್ನಿಗೆ ಇರಿದರು ಎಂದು ದೂರಿದ್ದಾರೆ.

ಭಾರತೀಯ ಕ್ರಿಕೆಟ್​ ತಂಡದ ಆಯ್ಕೆ ಸಮಿತಿ ಸದಸ್ಯ ಶರಣ್​ದೀಪ್​ ಸಿಂಗ್​ ವಿರುದ್ಧ ಹರಿಹಾಯ್ದಿರುವ ಅವರು, ತಂಡದ ಆಯ್ಕೆ ಸಮಿತಿ ಸಭೆಗೆ ಹೋದಾಗಲೆಲ್ಲ ಈ ವ್ಯಕ್ತಿ ಯುವರಾಜ್​ ಸಿಂಗ್​ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಆಗ್ರಹಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಕ್ರಿಕೆಟ್​ನ ಅ, ಆ, ಇ, ಈ... ಕೂಡ ಗೊತ್ತಿಲ್ಲದ ಇಂಥ ವ್ಯಕ್ತಿಯಿಂದ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ? ತುಂಬಾ ಬೇಕಾದವರು ಬೆನ್ನಿಗೆ ಇರಿದಿದ್ದಾರೆ ಎಂದಾಗ ಯಾರಿಗಾದರೂ ನೋವಾಗುವುದು ಸಜಹ. ಯುವರಾಜ್​ ಸಿಂಗ್​ ಉತ್ತಮ ಪ್ರದರ್ಶನ ಕೊಡುವುದನ್ನು ಮುಂದುವರಿಸಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಆಲ್ರೌಂಡರ್​ ಸುರೇಶ್​ ರೈನಾ ಮೇಲೆ ಧೋನಿಗೆ ಅತೀವ ಪ್ರೇಮವಿತ್ತು. ಹಾಗಾಗಿಯೇ ಅವರನ್ನು ತುಂಬಾ ಬೆಂಬಲಿಸುತ್ತಿದ್ದರು. 2011ರ ವಿಶ್ವಕಪ್​ ಟೂರ್ನಿಯ ಭಾರತ ತಂಡಕ್ಕೆ ಯುವಿಗಿಂತಲೂ ಹೆಚ್ಚಿನದಾಗಿ ಸುರೇಶ್​ ರೈನಾ ಸೇರ್ಪಡೆಯನ್ನು ಧೋನಿ ಬೆಂಬಲಿಸಿದ್ದರು ಎಂದು ಯೋಗರಾಜ್​ ತಿಳಿಸಿದ್ದಾರೆ.

ವಿದಾಯದ ಸರಣಿ ಬೇಕು: ಇಂದಲ್ಲ ನಾಳೆ ಎಂ.ಎಸ್​. ಧೋನಿ, ವಿರಾಟ್​ ಕೊಹ್ಲಿ ನಿವೃತ್ತರಾಗಲೇಬೇಕು. ಅದು ಯಾರೇ ಆಗಿರಲಿ, ಅವರಿಗೊಂಡು ವಿದಾಯದ ಸರಣಿ ಕೊಡಬೇಕು ಎಂದು ನಾನು ಇತ್ತೀಚೆಗೆ ಭೇಟಿಯಾಗಿದ್ದ ವೇಳೆ ರವಿ ಶಾಸ್ತ್ರಿ ಅವರನ್ನು ಆಗ್ರಹಿಸಿದ್ದೆ ಎಂದು ಯೋಗರಾಜ್​ ಸಿಂಗ್​ ಹೇಳಿದ್ದಾರೆ.

ಆದರೆ, ಯುವರಾಜ್​ ಸಿಂಗ್​ಗೆ ಇಂಥ ವಿದಾಯದ ಸರಣಿಯಲ್ಲಿ ಆಡುವ ಅವಕಾಶ ಕೊಡದೆ ವಂಚಿಸಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 2011ರ ವಿಶ್ವಕಪ್​ ವಿಜೇತ ತಂಡದ ಭಾಗವಾಗಿದ್ದ ಯುವರಾಜ್​ ಸಿಂಗ್​ ಕ್ಯಾನ್ಸರ್​ಗೆ ತುತ್ತಾಗಿದ್ದರು. ಬಳಿಕ ಚಿಕಿತ್ಸೆ ಪಡೆದು ಮೈದಾನಕ್ಕೆ ಮರಳಲು ಯತ್ನಿಸಿದ್ದರು. ಆದರೆ ಉತ್ತಮ ಪ್ರದರ್ಶನ ತೋರಲು ವಿಫಲರಾದ ಹಿನ್ನೆಲೆಯಲ್ಲಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಈ ಕಾರಣಕ್ಕಾಗಿ ಅವರು 2019ರ ಜೂನ್​ 10ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net