6 ವರ್ಷದಿಂದ ಪ್ರೀತಿಸಿ, ಗರ್ಭಿಣಿ ಮಾಡಿ ಕೈಕೊಡಲು ಯತ್ನಿಸಿದ ಪ್ರಿಯಕರನಿಗೆ ಬುದ್ಧಿ ಕಲಿಸಿದ ಪ್ರೇಯಸಿ!

Lover Caught
Published on

ಚೆನ್ನೈ: ಪ್ರೀತಿಯ ಹೆಸರಲ್ಲಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡು ಗರ್ಭವತಿ ಮಾಡಿ ಎಸ್ಕೇಪ್​ ಆಗಲು ಯತ್ನಿಸಿದ ಪ್ರಿಯಕರನ ವಿರುದ್ಧ ಹೋರಾಟ ನಡೆಸಿದ ಸಂತ್ರಸ್ತೆ ಕೊನೆಗೂ ಆತನನ್ನು ಮದುವೆಯಾಗುವಲ್ಲಿ ಯಶಸ್ವಿಯಾಗಿದ್ದಾಳೆ.

ತಮಿಳುನಾಡಿನ ಕಡ್ಡಲೂರು ಜಿಲ್ಲೆಯ ವೃದ್ಧಾಚಲಂ ಬಳಿಯ ಭುವನುರ್​ ಏರಿಯಾದ ನಿವಾಸಿ ನಿತೀಶ್​ ಕುಮಾರ್​ ಬಿಎ ಪಧವೀಧರನಾಗಿದ್ದಾನೆ. ಎಂ. ಪರೂರ್​ ಗ್ರಾಮದ ನಿವಾಸಿ ನಾಗಲಕ್ಷ್ಮಿ, ಮಂಗಳಂಪೇಟೆ ಪ್ರದೇಶದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ನಿತೀಶ್​ ಕುಮಾರ್​ ಆಗಾಗ ಆಕೆಯ ಅಂಗಡಿಗೆ ಭೇಟಿ ನೀಡುತ್ತಿದ್ದ. ಇದರಿಂದ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಇದೇ ಸ್ನೇಹ ಪ್ರೀತಿಗೆ ತಿರುಗಿತು. ಕಳೆದ 6 ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು.

ಅನೇಕ ಬಾರಿ ಇಬ್ಬರು ಖಾಸಗಿಯಾಗಿ ಭೇಟಿಯಾಗಿದ್ದು, ಇಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆದಿತ್ತು. ಇದರಿಂದಾಗಿ ನಾಗಲಕ್ಷ್ಮಿ 6 ತಿಂಗಳ ಗರ್ಭಿಣಿಯಾಗಿದ್ದಾಳೆ. ಹೀಗಾಗಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಪ್ರಿಯಕರನ ಬಳಿ ಕೇಳಿದ್ದಾಳೆ. ಆದರೆ, ಆತನ ಮದುವೆಯನ್ನು ನಿರಾಕರಿಸಿದ್ದಾನೆ.

ಇದಾದ ಬಳಿಕ ನಾಗಲಕ್ಷ್ಮಿ ಭುವನೂರಿನಲ್ಲಿರುವ ನಿತೀಶ್​ ಕುಮಾರ್​ ಮನೆಗೆ ತೆರಳಿ ನ್ಯಾಯ ಕೇಳಿದ್ದಾಳೆ. ಆದರೆ, ಪಾಲಕರು ಯಾವುದೇ ಸ್ಪಂದನೆ ನೀಡಲಿಲ್ಲ. ಬಳಿಕ ಪೊಲೀಸ್​ ಠಾಣೆಯೊಂದೇ ನನಗಿರುವ ಕೊನೆಯ ಆಯ್ಕೆ ಅಂದುಕೊಂಡು ವೃದ್ಧಾಚಲಾಂನ ಮಹಿಳಾ ಪೊಲೀಸ್​ ಠಾಣೆಗೆ ನಾಗಲಕ್ಷ್ಮಿ ದೂರು ನೀಡಿದಳು.

ದೂರಿನ ಆಧಾರದ ಮೇಲೆ ನಿತೀಶ್​ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾಗಲಕ್ಷ್ಮಿಯನ್ನು ಮದುವೆಯಾಗಲು ಆತ ಒಪ್ಪಿಕೊಂಡಿದ್ದಾನೆ. ಇದಾದ ಬಳಿಕ ಎರಡು ಕುಟುಂಬದವರ ಸಮ್ಮುಖದಲ್ಲಿ ವೃದ್ಧಾಚಲಂ ಮುತ್ತುಮಾರಿಯಮ್ಮನ ದೇವಸ್ಥಾನದಲ್ಲಿ ಪೊಲೀಸರೇ ಮುಂದೆ ನಿಂತು ಇಬ್ಬರ ಮದುವೆ ಮಾಡಿಸಿದ್ದಾರೆ. ನಂತರ ನಾಗಲಕ್ಷ್ಮಿಗೆ ಯಾವುದೇ ತೊಂದರೆ ನೀಡದಂತೆ ನಿತೀಶ್‌ಕುಮಾರ್‌ಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net