

ಬೆಂಗಳೂರು: ಕಾವೇರಿ ನೀರಿನ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ತಕ್ಷಣ ಮಧ್ಯಪ್ರವೇಶ ಮಾಡಬೇಕು ಹಾಗೂ ಎರಡೂ ರಾಜ್ಯಗಳ ವಾಸ್ತವ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸುಪ್ರೀಂ ಕೋರ್ಟ್ಗೆ ಪರಿಶೀಲನಾ ಅರ್ಜಿ ಸಲ್ಲಿಸಲು ಜಲಶಕ್ತಿ ಸಚಿವಾಲಯಕ್ಕೆ ಆದೇಶ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದರು.
ಜೆ.ಪಿ. ಭವನದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರಿಗೆ ಈ ಸಂಬಂಧ ಈಗಾಗಲೆ ಸುದೀರ್ಘ ಪತ್ರ ಬರೆದಿರುವುದನ್ನು ಬಹಿರಂಗಪಡಿಸಿ, ಪತ್ರವನ್ನು ಪ್ರಧಾನಿ ಸಕಾರಾತ್ಮಕವಾಗಿ ಪರಿಗಣಿಸುವ ವಿಶ್ವಾಸವಿದೆ ಎಂದರು.
ಕಾವೇರಿ ಕೊಳ್ಳದ ಜಲಾಶಯಗಳಿಗೆ ನೀರು ಹರಿದು ಬಂದಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಕಾವೇರಿ ನದಿ ನೀರು ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿವೆ. ಇದು ರಾಜ್ಯದ ಸಂಕಷ್ಟಕ್ಕೆ ಕಾರಣವಾಗಿದೆ. ಕಾವೇರಿ ಭಾಗದ ಜನ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.
ತಮಿಳುನಾಡು ಬೇಡ, ಕರ್ನಾಟಕವೂ ಬೇಡ. ಬೇರೆ ರಾಜ್ಯಗಳ ತಟಸ್ಥ ತಂಡವೊಂದನ್ನು ಅಧ್ಯಯನಕ್ಕಾಗಿ ಕಳುಹಿಸಬೇಕು. ಈ ವಿಚಾರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಪೂರ್ಣವಾಗಿ ವಿಫಲವಾಗಿದೆ. ಈ ಬಗ್ಗೆ ಕುಮಾರಸ್ವಾಮಿ ಅವರು ಸ್ಥಳ ಪರಿಶೀಲನೆ ಮಾಡಬೇಕಿತ್ತಾ? ಯಾಕೆ ಸರ್ಕಾರಕ್ಕೆ ಸಾಧ್ಯವಿಲ್ಲವೇ? ನಮ್ಮ ಜಲ ಸಂಪನ್ಮೂಲ ಇಲಾಖೆಗೆ ಏನಾಗಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅನ್ಯಾಯ ಮಾಡಿದೆ: ಕಾಂಗ್ರೆಸ್ ಮೊದಲಿನಿಂದಲೂ ಕಾವೇರಿ ಬಗ್ಗೆ ಕರ್ನಾಟಕದ ಪರ ನಿಲುವು ಇಲ್ಲ. ಕಾವೇರಿ ವಿಷಯವನ್ನು ನಿರ್ವಹಣೆ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪ ಮಾಡಿದರು.
ನೀರಿಲ್ಲದ ಕೆಆರ್ಎಸ್ ಚಿತ್ರಗಳ ಪ್ರದರ್ಶನ: ರಾಜ್ಯದಲ್ಲಿ ದೊಡ್ಡ ಪ್ರಮಾಣದ ಜಲ ಸಂಕಷ್ಟ ಉಂಟಾಗಿದೆ. ಜಲಾಶಯಗಳಲ್ಲಿ ನೀರಿಲ್ಲ. ಆದರೂ ತಮಿಳುನಾಡಿಗೆ ನೀರು ಬಿಡಿ ಎಂದು ಆದೇಶಗಳು ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ದೇವೇಗೌಡ, ಬರಿದಾದ ಕೆಆರ್ಎಸ್ ಜಲಾಶಯದ ಚಿತ್ರಗಳನ್ನು ಪ್ರದರ್ಶಿಸಿ ಕಣ್ಣೀರು ತಂದುಕೊಂಡರು.
ಮೋದಿಗೆ ಸಮಗ್ರ ಮಾಹಿತಿ ರವಾನೆ: ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಎಲ್ಲ ಮಾಹಿತಿಯನ್ನು ಮೋದಿ ಅವರಿಗೆ ವಿವರಿಸಿದ್ದೇನೆ. ಮೊದಲ ತೀರ್ಪನಲ್ಲಿ 13 ಟಿಎಂಸಿ, ಮತ್ತೆ ಐದು ಸಾವಿರ ಕ್ಯೂಸೆಕ್. ಇದು ಎಂಥಾ ದುರಂತ ಅಲ್ಲವೆ? ಇದು ಸರ್ಕಾರದ ವೈಫಲ್ಯ ಅಲ್ಲದೆ ಮತ್ತೇನು? ರಾಜ್ಯದಲ್ಲಿ ಬರದಿಂದ 40 ಲಕ್ಷ ಹೆಕ್ಟೇರ್ಗೂ ಹೆಚ್ಚು ಬೆಳೆ ನಾಶವಾಗಿದೆ ಎಂದರು.
ಮಹದಾಯಿ ಹೊಡೆತ ಒಂದು ಕಡೆ, ಮತ್ತೊಂದು ಕಡೆ ಆಂಧ್ರದ ಹೊಡೆತ, ಮಹರಾಷ್ಟ್ರದ ಹೊಡೆದ ಇನ್ನೊಂದು ಕಡೆ. ಕರ್ನಾಟಕದ ಕಥೆ ಏನಾಗಬೇಕು? ತಮಿಳುನಾಡಿಗೆ ಮೂರು ಬೆಳೆ, ನಮಗೆ ಒಂದೇ ಬೆಳೆ. ಇದ್ಯಾವ ಸೀಮೆ ನ್ಯಾಯ? ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಅನ್ಯಾಯ ಆಗಿದೆ, ನಿಜ. ಹಾಗಂತ ಕಾನೂನನ್ನು ಕೈಗೆ ಎತ್ತಿಕೊಳ್ಳುವುದು ಬೇಡ. ಶಾಂತಿಯುತವಾಗಿ ಬಂದ್ ನಡೆಯಲಿ ಎಂದು ದೇವೇಗೌಡ ಮನವಿ ಮಾಡಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಖ್, ಕೆ.ಎ.ತಿಪ್ಪೇಸ್ವಾಮಿ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಸೇರಿ ಹಲವರು ನಾಯಕರು ಉಪಸ್ಥಿತರಿದ್ದರು.
2. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಎಲ್ಲ ನಾಲ್ಕು ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಕೇವಲ 51 ಟಿಎಂಸಿ ಮಾತ್ರ.
3. ಈಗಿರುವ ಬೆಳೆಗಳಿಗೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕೆ ರಾಜ್ಯಕ್ಕೆ 112 ಟಿಎಂಸಿ ನೀರು ಬೇಕಿದೆ. 40 ಟಿಎಂಸಿಗೂ ಮಿಗಿಲಾದ ಹೆಚ್ಚುವರಿ ಬಿಡುಗಡೆಗೆ ಬೇಡಿಕೆ ಇಟ್ಟಿರುವ ತಮಿಳುನಾಡಿನ ಧೋರಣೆ ಅನ್ಯಾಯ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ಗುರುತಿಸಲಾದ/ನಿಯೋಜಿತ ಜಲಾಶಯಗಳ ಪರಿಪೂರ್ಣ ಪರಿಶೀಲನೆ ನಡೆಸಲು ಸಮಗ್ರ ಜಲಾಶಯ ಕಾರ್ಯಾಚರಣೆ ವ್ಯವಸ್ಥೆ ಅನುಷ್ಟಾನಕ್ಕೆ ತರಬೇಕು.
5. ನೀರಾವರಿ ಅಧ್ಯಯನದಲ್ಲಿ ಪರಿಣತಿ ಹೊಂದಿರುವ ಹಾಗೂ ಕೇಂದ್ರ ಸರ್ಕಾರದಿಂದ ಸ್ವತಂತ್ರವಾದ ಬಾಹ್ಯ ಏಜೆನ್ಸಿಯನ್ನು ತಕ್ಷಣವೇ ನೇಮಿಸಬೇಕು.
6. ಸಮಿತಿಯು ಸೂಕ್ತ ಕ್ರಮ ಕೈಗೊಳ್ಳಲು ಸಿಡಬ್ಲು್ಯಎಂಎಗೆ ಮಾತ್ರವಲ್ಲದೆ ಸುಪ್ರೀಂ ಕೋರ್ಟ್ಗೆ ತಕ್ಷಣದ ಪರಿಹಾರದ ಕ್ರಮವಾಗಿ ವರದಿ ಮಾಡಬೇಕು.
7. ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿಗಳು ಕಾವೇರಿ ಜಲಾನಯನ ಪ್ರದೇಶದಲ್ಲಿ ಗುರುತಿಸಲಾದ ಎಲ್ಲ ಜಲಾಶಯಗಳಿಗೆ ನಿಯತಕಾಲಿಕವಾಗಿ ಭೇಟಿ ನೀಡಬೇಕು.
8. 15 ದಿನಗಳಿಗೆ ಒಮ್ಮೆ ಸಲ್ಲಿಸಲಾಗುವ ದಾಖಲೆಗಳನ್ನು ಅವಲಂಬಿಸದೆ ನೆಲದ ವಾಸ್ತವತೆಯನ್ನು ಅರಿತು ನಿರ್ಧಾರಗಳನ್ನು ಕೈಗೊಳ್ಳಬೇಕು.
ಮಂಡ್ಯ: ಕಾವೇರಿ ಕಣಿವೆ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ ಮುಂದುವರಿದಿದೆ. ಅಂತೆಯೇ ಕಾವೇರಿ ಹೋರಾಟ ಬೆಂಬಲಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷದ ಕಾರ್ಯಕರ್ತರು ಸೋಮವಾರ ಚಡ್ಡಿ ಚಳವಳಿ ನಡೆಸಿದರು.
ಜಿಲ್ಲಾ ಬಿಜೆಪಿ ಕಚೇರಿಯಿಂದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ನೇತೃತ್ವದಲ್ಲಿ ಕಾರ್ಯಕರ್ತರು ರಾಸುಗಳ ಜತೆ ಚಡ್ಡಿ ಮೆರವಣಿಗೆ ಹೊರಟು ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಯಿತು.
ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಸಮಸ್ಯೆ ಬೇಕಿಲ್ಲ. ಐಎನ್ಡಿಐಎ ಒಕ್ಕೂಟವನ್ನು ಸಂತೋಷಪಡಿಸಲು ನಮ್ಮ ರೈತರನ್ನು ಕಡೆಗಣಿಸಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದರು. ಡಿ.ಕೆ.ಶಿವಕುಮಾರ್ ಹಿಂದೆ ನೀರಿಗಾಗಿ ಪಾದಯಾತ್ರೆ ನಡೆಸಿದ್ದರು. ಆದರೆ ಇಂದು ಸರ್ಕಾರದ ಜತೆಗೆ ಕಾಂಗ್ರೆಸ್ಸಿಗರ ಬಣ್ಣ ಬಯಲಾಗಿದೆ ಎಂದರು.
ಕರ್ನಾಟಕ-ತಮಿಳುನಾಡು ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮುಂದೆ ಸಮರ್ಥ ವಾದ ಮಂಡಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದ ನೀರಿನ ಬೇಡಿಕೆ ಮತ್ತು ತಮಿಳುನಾಡಿನ ಹೆಚ್ಚುವರಿ ಬೇಡಿಕೆ ಬಗ್ಗೆ ಯಾವುದೇ ವೈಜ್ಞಾನಿಕ ವರದಿ ತಯಾರಿಸಿಲ್ಲ. | ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ ಕುಡಿಯಲು ಕಾವೇರಿ ನೀರು ಕೊಡಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕೇಳಿದರೆ ವಿಸ್ಕಿ, ಬ್ರಾಂಡಿ ಕೊಡುತ್ತೇವೆ ಎನ್ನುತ್ತಾರೆ. ಜನರನ್ನು ಕುಡಿಸಿ ಕುಡಿಸಿ ಹಾಳು ಮಾಡುತ್ತಾರೆ. ಈ ಸರ್ಕಾರ ವಿಸ್ಕಿ, ಬ್ರಾಂಡಿ, ರಮ್ ಕೊಡುವ ಸರ್ಕಾರ. | ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಉಪ ಮುಖ್ಯಮಂತ್ರಿ
ದಾವಣಗೆರೆ: ಭದ್ರಾ ಜಲಾಶಯದಿಂದ ನಾಲೆಗಳಿಗೆ ನಿರಂತರವಾಗಿ ನೂರು ದಿನ ನೀರು ಹರಿಸಲು ಒತ್ತಾಯಿಸಿ ಭಾರತೀಯ ರೈತ ಒಕ್ಕೂಟ, ಬಿಜೆಪಿ ಮತ್ತು ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ದಾವಣಗೆರೆ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದಲ್ಲಿನ ವಾಣಿಜ್ಯ ಮಳಿಗೆ, ಅಂಗಡಿ, ಮುಂಗಟ್ಟು, ಹೋಟೆಲ್ಗಳು ಬಂದ್ ಆಗಿದ್ದವು. ಕೆಲವು ಶಾಲೆ, ಕಾಲೇಜುಗಳಿಗೆ ರಜೆ ಘೊಷಿಸಲಾಗಿತ್ತು. ಆಟೋ ಸಂಚಾರ ಎಂದಿನಂತೆ ಸಾಮಾನ್ಯವಾಗಿತ್ತು. ಬೆಳಗ್ಗೆ ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾಲೆಗಳಿಗೆ ನೀರು ಸ್ಥಗಿತಗೊಳಿಸಿದ್ದರಿಂದ ಭತ್ತದ ಬೆಳೆ ನಾಟಿ ಮಾಡಿರುವ ರೈತರು ಆತಂಕದಲ್ಲಿದ್ದಾರೆ. ಈ ಮೊದಲು ತಿಳಿಸಿದಂತೆ ನೂರು ದಿನ ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಬೆಂಗಳೂರು: ತಮಿಳು ನಾಡಿಗೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು. ನೀರು ನಿಲ್ಲಿಸಿದರೆ ಯಾವುದೇ ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಜೆ.ಪಿ.ಭವನದಲ್ಲಿ ಮಾತನಾಡಿದ ಅವರು, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಸೂಚನೆ ನೀಡಿದ ದಿನವೇ ನಾನು ಪ್ರಧಾನಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ಹೇಳಿದ್ದೆ. ಸುಪ್ರೀಂ ಕೋರ್ಟಿಗೆ ತಮಿಳುನಾಡಿನವರು ಅರ್ಜಿ ಹಾಕಿದ್ದಾರೆ, ನಮ್ಮ ರಾಜ್ಯದಿಂದ ಕೂಡ ಅರ್ಜಿ ಹಾಕಿ. ಅಲ್ಲಿವರೆಗೂ ನೀರು ಬಿಡಬೇಡಿ ಎಂದು ಹೇಳಿದ್ದೆ. ನನ್ನ ಒತ್ತಡಕ್ಕೆ ಸರ್ವಪಕ್ಷ ಸಭೆ ಕೂಡ ಕರೆದಿದ್ದರು. ಸುಪ್ರೀಂ ಕೋರ್ಟ್ ಮುಂದೆ ಈ ಸರ್ಕಾರ ಏನು ವಾಸ್ತವಾಂಶ ಇಟ್ಟಿದೆ ಎಂದು ಹೇಳಲಿ. ದೇವೇಗೌಡರ ಬದ್ಧತೆ ಇವರಿಗೆ ಇದೆಯಾ? ಇವರಿಂದ ಕಲೀಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು.
ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಕಾವೇರಿ ವಿಚಾರದಲ್ಲಿ ಇದೇ ಸ್ಥಿತಿ ಬಂದಾಗ ದೇವೇಗೌಡರ ಮನೆಗೆ ಓಡಿ ಬಂದಿದ್ದರಲ್ಲ. ಆಗ ದೇವೇಗೌಡರು ಗಾಂಧಿ ಪ್ರತಿಮೆ ಬಳಿ ಧರಣಿ ಕೂತರು. ಆಗ ಕೇಂದ್ರ ಸಚಿವರು ಓಡಿ ಬಂದರು. ಅದೆಲ್ಲ ಮರೆತುಹೋಗಿರಬೇಕು. ಇವರಿಂದ ನಾವು ಕಲೀಬೇಕಿಲ್ಲ ಎಂದು ಚಾಟಿ ಬೀಸಿದರು.
ಸುಪ್ರೀಂ ಕೋರ್ಟ್ ಮುಂದೆ ತಮಿಳುನಾಡು ಅರ್ಜಿ ಹಾಕಿದಾಗಲೇ ನಾವು ಅರ್ಜಿ ಹಾಕಿಕೊಂಡಿದ್ದರೆ ಅಲ್ಲಿಯವರೆಗೂ ನೀರು ಉಳಿಯುತ್ತಿತ್ತು. ಅಷ್ಟು ಸಾಮಾನ್ಯ ತಿಳಿವಳಿಕೆಯೂ ಈ ಸರ್ಕಾರಕ್ಕೆ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಅವಕಾಶವಿದೆ ಎಂದ ಸಿಎಂ ಸಿದ್ದರಾಮಯ್ಯ, ಕಾವೇರಿ ನೀರಿನ ಸಮಸ್ಯೆ ಬಗ್ಗೆ ಕೆಲವು ರಾಜಕೀಯ ನಾಯಕರು ತಪು್ಪ ಮಾಹಿತಿ ನೀಡಿ ಹೋರಾಟಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ಭಿನ್ನಶೈಲಿಯಲ್ಲಿ ಟೀಕಿಸಿದರು.
ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ನವರು ರಾಜಕೀಯ ಮಾಡುತ್ತಿದ್ದಾರೆ. ಆದರೆ ಇದೇ ವಿಷಯ ಸಂಬಂಧ ನಡೆಯಲಿರುವ ಬೆಂಗಳೂರು ಬಂದ್, ಸೆ.29ರ ಕರ್ನಾಟಕ ಬಂದ್ ಅನ್ನು ನಾವು ಹತ್ತಿಕ್ಕುವುದಿಲ್ಲ ಎಂದರು.
ವ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿದ್ದೇವೆ ಎಂದು ವಿರೋಧ ಪಕ್ಷಗಳು ಟೀಕಿಸಿ ರಾಜೀನಾಮೆ ಕೇಳುತ್ತಿವೆ. ಕಾವೇರಿ ವಿಷಯ ರ್ಚಚಿಸಲು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ರಾಜೀನಾಮೆ ಕೇಳಲಿಲ್ಲವೇಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ವಾದ ಮಂಡನೆಗೆ ಸಜ್ಜು: ಕಾವೇರಿ ನೀರು ಹರಿಸುವ ಬಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ವಾದ ಮಂಡಿಸಿದ್ದೆವು. ನಮ್ಮ ಹಾಗೂ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದೇ ಪ್ರಕರಣ ಪುನಃ ಮಂಗಳವಾರ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬರಲಿದ್ದು, ಇನ್ನಷ್ಟು ಬಲವಾಗಿ ವಾದ ಮಂಡಿಸಲು ಸಜ್ಜಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಜವಾಬ್ದಾರಿಯುತ ವರ್ತನೆ: ಮಳೆ ಕೊರತೆಯಿಂದಾಗಿ ಉದ್ಭವವಾಗಿರುವ ಕಾವೇರಿ ನೀರು ಹಂಚಿಕೆ ವಿವಾದವನ್ನು ರಾಜ್ಯದ ಹಿತರಕ್ಷಣೆಗೆ ಅಡ್ಡಿಯಾಗದಂತೆ ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ನೆಲ-ಜಲಭಾಷೆಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಲು ಹೋಗದೆ, ಒಗ್ಗಟ್ಟಾಗಿ ಎದುರಾದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ಇಂತಹದೊಂದು ಪರಂಪರೆ ಕರ್ನಾಟಕಕ್ಕೆ ಇದೆ. ಈ ಪರಂಪರೆ ಮುಂದುವರಿಸಿ ಕೊಂಡು ಹೋಗುವ ಜವಾಬ್ದಾರಿ ಬಿಜೆಪಿ, ಜೆಡಿಎಸ್ ಪಕ್ಷಗಳ ಮೇಲಿದೆ ಎಂದು ಸಲಹೆ ನೀಡಿದ್ದಾರೆ.
ರಾಜ್ಯದ ಹಿತರಕ್ಷಣೆಗೆ ಪ್ರತಿಭಟನೆ ಮಾಡಲು ನಾವು ಸಹಕಾರ ನೀಡುತ್ತೇವೆ. ನೆಲ, ಜಲ, ಭಾಷೆಯನ್ನು ಎಲ್ಲರೂ ಉಳಿಸಿಕೊಳ್ಳಬೇಕು. ಯಾರ ಹೋರಾಟಗಳಿಗೂ ಸರ್ಕಾರ ಅಡ್ಡಿಪಡಿಸುವುದಿಲ್ಲ. ಆದರೆ ಇದರಿಂದ ಜನರಿಗೆ ತೊಂದರೆ ಆಗಬಾರದು, ಶಾಂತಿ ಕಾಪಾಡಬೇಕು, ಹೋರಾಟಗಳಿಗೆ ಸರ್ಕಾರದ ಸಹಕಾರ ಇದ್ದೇ ಇರುತ್ತದೆ. | ಡಿ.ಕೆ ಶಿವಕುಮಾರ್, ಉಪ ಮುಖ್ಯಮಂತ್ರಿ ಕಾವೇರಿ ನೀರಿನ ಸಂಕಷ್ಟ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆವಹಿಸುವಂತೆ ಕೋರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ರ ಬರೆದಿರುವುದನ್ನು ಸ್ವಾಗತಿಸುವೆ. ನಾಡಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಮೋದಿ ಅವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದೊಂದೇ ಪರಿಣಾಮಕಾರಿ, ಸಂದರ್ಭಕ್ಕೆ ತಕ್ಕ ಪರಿಹಾರವಾಗಿದೆ. | ಸಿದ್ದರಾಮಯ್ಯ, ಸಿಎಂ