ಸಂಬಂಧಗಳ ಸವಿ ಎಲ್ಲಿದೆ?: ಮನೋಲ್ಲಾಸ

Movie
Published on
| ಜಯಶ್ರೀ ಜೆ. ಅಬ್ಬಿಗೇರಿ 
ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದು, ಶಾಲೆಯಲ್ಲಿ ಒಟ್ಟಿಗೆ ಕಲಿತು, ಕಾಲೇಜಿಗೂ ಒಟ್ಟಿಗೆ ಹೋದ ರಾಮು ಮತ್ತು ಭೀಮು ಎಂಬ ಇಬ್ಬರು ಸ್ನೇಹಿತರು ಒಟ್ಟಿಗೆ ಸೇನೆ ಸೇರಿದರು. ಯುದ್ಧ ಆರಂಭವಾಗುತ್ತದೆ. ಇಬ್ಬರೂ ಒಂದೇ ತುಕುಡಿಯಲ್ಲಿರುತ್ತಾರೆ. ಒಂದು ರಾತ್ರಿ ಇವರ ಮೇಲೆ ಶತ್ರುಗಳು ಮುಗಿಬೀಳುತ್ತಾರೆ. ಕಗ್ಗತ್ತಲಿನಿಂದ ಶಬ್ಧವೊಂದು ಕೇಳಿಬರುತ್ತದೆ. ಭೀಮು, ಬೇಗ ಬಾ ನನಗೆ ಸಹಾಯ ಮಾಡು ಎಂದು. ತನ್ನ ಗೆಳೆಯ ರಾಮು ಆಪತ್ತಿನಲ್ಲಿದ್ದಾನೆ ಅವನೇ ಕರೆಯುತ್ತಿದ್ದಾನೆಂದು ಗುರುತಿಸಿದ ಭೀಮು, ಕ್ಯಾಪ್ಟನ್​ನನ್ನು ಕೇಳುತ್ತಾನೆ, ‘ನಾನೀಗ ಹೋಗಬಹುದೇ’ ಎಂದು. ಆಗ ಕ್ಯಾಪ್ಟನ್, ‘ನೀನೀಗ ಹೋಗಲು ಸಾಧ್ಯವಿಲ್ಲ. ಹೋಗಲು ನಾನು ಬಿಡುವುದಿಲ್ಲ. ನನಗೆ ಯೋಧರ ಕೊರತೆಯಿದೆ. ಹೀಗಿರುವಾಗ ಇನ್ನೊಬ್ಬ ಯೋಧನನ್ನು ಕಳೆದುಕೊಳ್ಳಲು ನಾನು ಬಿಡುವುದಿಲ್ಲ. ಅಲ್ಲದೆ, ಅವನು ಬದುಕಿ ಉಳಿಯಲಾರ ಎಂದೆನಿಸುತ್ತಿದೆ’ ಎನ್ನುತ್ತಾನೆ. ಭೀಮು ಸುಮ್ಮನಾಗುತ್ತಾನೆ.

ಮತ್ತೆ ಆ ಕಡೆಯಿಂದ ರಾಮು ಕೂಗುತ್ತಾನೆ. ‘ಭೀಮು ದಯವಿಟ್ಟು ಬೇಗ ಬಾ ನನಗೆ ಸಹಾಯ ಮಾಡು’, ಕ್ಯಾಪ್ಟನ್ ಅನುಮತಿ ನಿರಾಕರಿಸಿದ ಕಾರಣ ಈ ಬಾರಿಯೂ ಭೀಮು ಸುಮ್ಮನೇ ಕುಳಿತುಕೊಳ್ಳುತ್ತಾನೆ. ಮತ್ತೆ ಮತ್ತೆ ರಾಮು ಕೂಗು ಕೇಳುತ್ತಿರುತ್ತದೆ. ಈ ಬಾರಿ ಭೀಮುಗೆ ತಡೆಯಲಾಗಲಿಲ್ಲ. ಅವನು ‘ಕ್ಯಾಪ್ಟನ್, ಇದು ನನ್ನ ಬಾಲ್ಯದ ಗೆಳೆಯನ ಕೂಗು, ನಾನು ಅವನಿಗೆ ಸಹಾಯ ಮಾಡಲೇಬೇಕು’ ಎನ್ನುತ್ತಾನೆ. ಕ್ಯಾಪ್ಟನ್ ಗತ್ಯಂತರವಿಲ್ಲದೆ ಅನುಮತಿ ನೀಡುತ್ತಾನೆ. ಭೀಮು ತೆವಳುತ್ತ ರಾಮುನನ್ನು ಸಂಕಟದಿಂದ ಪಾರು ಮಾಡಿ ಹೊರತರುತ್ತಾನೆ. ಆದರೆ, ಅಷ್ಟರಲ್ಲಾಗಲೇ ರಾಮು ಸತ್ತು ಹೋಗಿರುತ್ತಾನೆ. ಇದನ್ನು ನೋಡಿ ಕ್ಯಾಪ್ಟನ್​ಗೆ ಅಸಾಧ್ಯ ಕೋಪ ಬರುತ್ತದೆ. ‘ನಾನು ಹೇಳಿರಲಿಲ್ಲವೇ? ಅವನು ಬದುಕುವುದಿಲ್ಲ, ಎಂದು. ಅವನು ಸತ್ತು ಹೋಗಿದ್ದಾನೆ. ನೀನೂ ಸತ್ತು ಹೋಗುವ ಸಾಧ್ಯತೆಯಿತ್ತು. ನಾನು ಇನ್ನೊಬ್ಬ ಯೋಧನನ್ನು ಕಳೆದುಕೊಳ್ಳಬೇಕಿತ್ತು. ಇದು ತಪ್ಪು’ ಎನ್ನುತ್ತಾನೆ. ಆಗ ಭೀಮು ಹೇಳುತ್ತಾನೆ. ‘ಕ್ಯಾಪ್ಟನ್, ನಾನು ಸರಿಯಾದ ಕೆಲಸವನ್ನೇ ಮಾಡಿದ್ದೇನೆ. ನಾನು ರಾಮು ಬಳಿ ಹೋದಾಗ ಅವನು ಇನ್ನೂ ಬದುಕಿದ್ದ. ಅವನು ಹೇಳಿದ ಕಟ್ಟಕಡೆಯ ಮಾತು ಏನು ಗೊತ್ತೆ? ಭೀಮು, ನನಗೆ ಗೊತ್ತಿತ್ತು ನೀನು ಬಂದೇ ಬರುತ್ತೀಯಾ’ ಅಂತ.

ನಾವು ನಮಗಾಗಿ ಬದುಕುವುದಕ್ಕಿಂತ ನಮ್ಮವರಿಗಾಗಿ ಬದುಕುವುದು ಶ್ರೇಷ್ಠ. ನಮ್ಮ ಕುಟುಂಬಕ್ಕಾಗಿ ಅವಲಂಬಿತರಿಗಾಗಿ, ಗೆಳೆಯರಿಗಾಗಿ, ಕಾಳಜಿ ಇರುವವರಿಗಾಗಿ, ಹಿತೈಷಿಗಳಿಗಾಗಿ, ಆತ್ಮೀಯರಿಗಾಗಿ ತ್ಯಾಗ ಮಾಡಬೇಕಾಗುತ್ತದೆ. ಉತ್ತಮ ಸಂಬಂಧಗಳೇ ಅಪರೂಪವಾಗಿರುವ ಈ ಕಾಲದಲ್ಲಿ ಮಧುರ ಸಂಬಂಧದ ಬಳ್ಳಿ ದೊರೆತರೆ ಅದನ್ನು ಸರಿಯಾಗಿ ಪೋಷಿಸಬೇಕು. ನಮ್ಮ ಕನಸುಗಳನ್ನು ಜೀವಿಸುವ ಸಲುವಾಗಿ ಇತರರು ಬೆಲೆ ತೆರದ ಹಾಗೆ ನೋಡಿಕೊಳ್ಳಬೇಕು. ಅನುಭಾವಿಗಳೊಬ್ಬರು ಹೇಳುತ್ತಾರೆ, ಸಮುದ್ರದ ನೀರಿನಲ್ಲಿ ಕರಗಿರುವ ಉಪ್ಪಿನಂತೆ ಸಂಬಂಧಗಳ ಸವಿರುಚಿ ನಮ್ಮೊಳಗೇ ಇದೆ. ಅದನ್ನು ನಮ್ಮಲ್ಲೇ ಹುಡುಕಬೇಕು. ಬದುಕನ್ನು ಸುಂದರಗೊಳಿಸುವ ಸಂಬಂಧಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಸುಖಕರ ಜೀವನಕ್ಕೆ ಸಂಬಂಧಗಳನ್ನು ಬಳಸುವುದಕ್ಕಿಂತ ಬೆಳೆಸುವುದನ್ನು ಕಲಿಯಬೇಕಿದೆ. ಸಂಬಂಧಗಳ ಸವಿ ಬಳಸುವುದರಲ್ಲಿಲ್ಲ, ಬೆಳೆಸುವುದರಲ್ಲಿದೆ. ಸಂಬಂಧಗಳ ಬೆಲೆ ಅರಿತು ಅವುಗಳನ್ನು ಬೆಳೆಸುತ್ತ ಸಂಬಂಧಗಳ ಸವಿ ಸವಿಯೋಣವಲ್ಲವೇ?

(ಲೇಖಕರು ಇಂಗ್ಲಿಷ್ ಉಪನ್ಯಾಸಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net