ಆ ಒಂದು ಪಾತ್ರ ರಶ್ಮಿಕಾಗಿಂತ ನನಗೆ ಚೆನ್ನಾಗಿ ಹೊಂದುತ್ತೆ: ನಟಿ ಐಶ್ವರ್ಯಾ ರಾಜೇಶ್​ ಹೇಳಿಕೆ

Aishwarya Rajesh
Published on

ಚೆನ್ನೈ: ಕಾಲಿವುಡ್​ ನಟಿ ಐಶ್ವರ್ಯಾ ರಾಜೇಶ್​ ಅವರ ಇತ್ತೀಚಿನ ಸಂದರ್ಶನದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಾರೆ. ಅದರಲ್ಲಿ ಐಶ್ವರ್ಯಾ, ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡಿದ್ದು, ಉಭಯ ನಟಿಯರ ಅಭಿಮಾನಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಐಶ್ವರ್ಯಾ ರಾಜೇಶ್​ ತಮಿಳು ಸಿನಿಮಾ ರಂಗದಲ್ಲಿ ಮುಂಚೂಣಿಯಲ್ಲಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕೇವಲ ನಟಿ ಮಾತ್ರವಲ್ಲದೆ, ನೃತ್ಯಗಾರ್ತಿ ಮತ್ತು ಹೋಸ್ಟ್​ ಕೂಡ ಹೌದು. ಅವರೋರುಮ್ ಇವರೋರುಮ್ ಸಿನಿಮಾ ಮೂಲಕ 2011ರಲ್ಲಿ ಕಾಲಿವುಡ್​ ಪದಾರ್ಪಣೆ ಮಾಡಿದ ಐಶ್ವರ್ಯಾ ತಮ್ಮ ಅಮೋಘ ಅಭಿನಯದ ಕಾರಣದಿಂದಾಗಿ ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ತಮಿಳು ಮಾತ್ರವಲ್ಲದೆ, ತೆಲುಗಿನಲ್ಲೂ ಐಶ್ವರ್ಯಾ ಗುರುತಿಸಿಕೊಳ್ಳುತ್ತಿದ್ದಾರೆ.

ಟ್ಯಾಕ್ಸಿ ಡ್ರೈವರ್​ ಪಾತ್ರದಲ್ಲಿ ಐಶ್ವರ್ಯಾ

ಐಶ್ವರ್ಯಾ ನಟನೆಯ ಡ್ರೈವರ್​ ಜಮುನಾ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಮಹಿಳೆಯರಿಗೆ ಹೆಚ್ಚು ಪ್ರಾಮುಖ್ಯತೆ ಇರುವ ಸಿನಿಮಾಗಳನ್ನೇ ಐಶ್ವರ್ಯಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಡ್ರೈವರ್​ ಜಮುನಾ ಸಿನಿಮಾದಲ್ಲಿ ಟ್ಯಾಕ್ಸಿ ಡ್ರೈವರ್​ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ನೆಲ್ಸನ್ ವೆಂಕಟೇಶನ್ ನಿರ್ದೇಶನದ ಫರ್ಹಾನಾ ಸಿನಿಮಾದಲ್ಲಿ ಐಶ್ವರ್ಯಾ ರಾಜೇಶ್ ನಟಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ತನ್ನ ಮಕ್ಕಳಿಗಾಗಿ ಎಲ್ಲ ಧಾರ್ಮಿಕ ನಿರ್ಬಂಧಗಳನ್ನು ದಾಟಿ ಕೆಲಸ ಮಾಡುವ ಮಹಿಳೆಯ ಜೀವನದ ಸುತ್ತ ಈ ಕಥೆ ಸುತ್ತುತ್ತದೆ. ಈ ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದರೂ ಅಭಿಮಾನಿಗಳಿಂದ ಉತ್ತಮ ಬೆಂಬಲ ಸಿಗುತ್ತಿದೆ. ಮಹಿಳಾ ಪ್ರಗತಿಯನ್ನೇ ಪ್ರಧಾನವಾಗಿಟ್ಟುಕೊಂಡು ಈ ಚಿತ್ರ ತಯಾರಾಗಿರುವುದರಿಂದ ಅನೇಕ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಬೆಂಬಲ ನೀಡುತ್ತಿದ್ದಾರೆ.

ಐಶ್ವರ್ಯಾಗೆ ಪೊಲೀಸ್​ ಭದ್ರತೆ

ಆದರೆ, ಫರ್ಹಾನಾ ಸಿನಿಮಾ ವಿರುದ್ಧ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ. ಐಶ್ವರ್ಯಾಗೆ ಕೆಲವರು ಬೆದರಿಕೆ ಸಹ ಹಾಕಿದ್ದಾರೆ. ಹೀಗಾಗಿ ಐಶ್ವರ್ಯಾ ರಾಜೇಶ್‌ಗೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಫರ್ಹಾನಾ ಚಿತ್ರದ ಪ್ರಚಾರಕ್ಕಾಗಿ ಐಶ್ವರ್ಯಾ ರಾಜೇಶ್ ಹಲವು ಸಂದರ್ಶನಗಳನ್ನು ನೀಡಿದ್ದು, ಒಳ್ಳೆಯ ತೆಲುಗು ಚಿತ್ರದಲ್ಲಿ ನಟಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ನನಗೆ ಚೆನ್ನಾಗಿ ಹೊಂದುತ್ತದೆ

ನನಗೆ ತೆಲುಗು ಸಿನಿಮಾಗಳು ಯಶಸ್ಸು ಖುಷಿಯನ್ನು ನೀಡುತ್ತದೆ. ನನಗೆ ತೆಲುಗಿನಲ್ಲಿ ನಟಿಸಲು ತುಂಬಾ ಇಷ್ಟ. ಪುಷ್ಪ ಸಿನಿಮಾದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರೆ ನಾನು ನಟಿಸುತ್ತಿದ್ದೆ. ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಶ್ರೀವಳ್ಳಿ ಪಾತ್ರ ಅವರಿಗೆ ನನಗೆ ಚೆನ್ನಾಗಿ ಹೊಂದುತ್ತದೆ ಎಂದು ಐಶ್ವರ್ಯಾ ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ತುಣುಕು ವೈರಲ್​ ಆಗಿದ್ದು, ಉಭಯ ನಟಿಯ ಅಭಿಮಾನಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net