ಇದೆಲ್ಲಾ ರಾಮ ಲಲ್ಲಾನ ಕೃಪಾಶೀರ್ವಾದ: ಅಯೋಧ್ಯೆಯ ಈ ಕಂಪನಿ ಷೇರು ನೀವು ಖರೀದಿಸಿದ್ದರೆ ಒಂದೇ ವಾರದಲ್ಲಿ ಹಣ ದುಪ್ಪಟ್ಟು!!

pakka
Published on

ಮುಂಬೈ: ಅಯೋಧ್ಯೆಯ ಕಂಪನಿಯೊಂದು ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಕಂಪನಿಯ ಹೆಸರು ಪಕ್ಕಾ ಲಿಮಿಟೆಡ್. ಪಕ್ಕಾ ಲಿಮಿಟೆಡ್‌ನ (PAKKA Ltd.) ಷೇರುಗಳು ಇದೇ ತಿಂಗಳು ಜನವರಿ ಆರಂಭದಿಂದ ಇಲ್ಲಿಯವರೆಗೆ 148% ರಷ್ಟು ಏರಿಕೆ ಕಂಡಿವೆ.

ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಅಯೋಧ್ಯೆ ಮೂಲದ ಈ ಕಂಪನಿಯು ಮಿಶ್ರಗೊಬ್ಬರ ತಟ್ಟೆಗಳು, ಬಟ್ಟಲುಗಳು ಮತ್ತು ಚಮಚಗಳನ್ನು ಪೂರೈಸುತ್ತದೆ ಎಂದು ತಿಳಿದ ನಂತರ ಕಳೆದ ಒಂದು ವಾರದಲ್ಲಿ ಸ್ಮಾಲ್‌ ಕ್ಯಾಪ್ ಸ್ಟಾಕ್ ಬೆಲೆ ದ್ವಿಗುಣಗೊಂಡಿದೆ. ಗುರುವಾರ ಈ ಕಂಪನಿಯ ಷೇರುಗಳು 12% ಕ್ಕಿಂತ ಹೆಚ್ಚು ಏರಿಕೆ ಕಂಡವು. ಶನಿವಾರ (ಜ. 20) ಈ ಕಂಪನಿಯ ಷೇರುಗಳು 14.35 ರೂಪಾಯಿ (3.87%) ಹೆಚ್ಚಳವಾಗಿ 385.60 ರೂಪಾಯಿಗೆ ತಲುಪಿವೆ.

ಈ ಕಂಪನಿಯು ತಯಾರಿಸಿದ ಪರಿಸರ ಸ್ನೇಹಿ ಆಹಾರ ಪ್ಲೇಟ್‌ಗಳಲ್ಲಿ ಪ್ರಸಾದ ನೀಡಲಾಗುತ್ತದೆ.

ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಕ್ಕಾ ಲಿಮಿಟೆಡ್‌ನಿಂದ ತಯಾರಿಸಿದ ಪರಿಸರ ಸ್ನೇಹಿ ಪ್ಲೇಟ್​ನಲ್ಲಿ ಭಕ್ತರಿಗೆ ಪ್ರಸಾದ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.

'ಕಾಂಪೊಸ್ಟ್​ ಟೇಬಲ್‌ವೇರ್‌ಗೆ ಹೆಸರುವಾಸಿಯಾದ ನಮ್ಮ ಪ್ರಮುಖ ಬ್ರ್ಯಾಂಡ್ CHUK ಅನ್ನು ರಾಮ ಮಂದಿರ ಟ್ರಸ್ಟ್‌, ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದೆ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಈ ಅತ್ಯಂತ ಮಹತ್ವದ ಕಾರ್ಯಕ್ರಮದಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲು ನಾವು ಸಿದ್ಧರಿದ್ದೇವೆ" ಎಂದು ಕಂಪನಿಯ ಅಧಿಕಾರಿ ಹೇಳಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಪಕ್ಕಾ ಲಿಮಿಟೆಡ್‌ನ ಷೇರುಗಳು ಸುಮಾರು 250% ರಷ್ಟು ಜಿಗಿದಿವೆ. ಕಂಪನಿಯ ಷೇರುಗಳು 2023ರ ಜನವರಿ 19ರಂದು 92.80 ರೂಪಾಯಿ ಇದ್ದುದು, , 2024ರ ಜನವರಿ 18ರಂದು 323.75 ರೂಪಾಯಿಗೆ ತಲುಪಿವೆ. ಕಳೆದ 4 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಕಂಪನಿಯ ಷೇರುಗಳು 1507% ರಷ್ಟು ಹೆಚ್ಚಾಗಿವೆ. ಕಳೆದ 6 ತಿಂಗಳಲ್ಲಿ 160% ರಷ್ಟು ಹೆಚ್ಚಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net