

ಹೈದರಾಬಾದ್: ಐಎಎಸ್ ಆಗಬೇಕೆಂಬ ಯುವತಿಯ ಕನಸು ನೀರಿನಲ್ಲಿ ಕೊನೆಗೊಂಡಿದೆ. ದೆಹಲಿಯ ಹಳೇ ರಾಜೇಂದ್ರನಗರದಲ್ಲಿರುವ ರಾವ್ ಐಎಎಸ್ ಸ್ಟಡಿ ಸರ್ಕಲ್ನ ನೆಲಮಾಳಿಗೆಗೆ ನೀರು ನುಗ್ಗಿ ಸಂಭವಿಸಿದ ಅವಘಡದಲ್ಲಿ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ ಶ್ರೀರಾಂಪುರ ಮೂಲದ ತಾನಿಯಾ ಸೋನಿ (22) ಮೃತಪಟ್ಟಿದ್ದಾರೆ. ಶನಿವಾರ (ಜುಲೈ 27) ರಾತ್ರಿ ನಡೆದ ಈ ಅವಘಡದಲ್ಲಿ ಒಟ್ಟು ಮೂವರು ಸಾವಿಗೀಡಾಗಿದ್ದಾರೆ. ಇದರಲ್ಲಿ ಸೋನಿ ಕೂಡ ಒಬ್ಬಳು ಎಂದು ತಿಳಿದು ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ.
ಈ ಘಟನೆಯ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಕೂಡ ಆಘಾತ ವ್ಯಕ್ತಪಡಿಸಿದ್ದಾರೆ. ಬಿಹಾರದ ಔರಂಗಾಬಾದ್ ಮೂಲದ ವಿಜಯಕುಮಾರ್ ಸಿಂಗರೇಣಿ ಅವರು ಶ್ರೀರಾಂಪುರ ವಿಭಾಗದಲ್ಲಿ ಎಸ್ಆರ್ಪಿ-1 ಗಣಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸಿಸಿಸಿ ಟೌನ್‌ಶಿಪ್ ಬಿ-2 ಕಂಪನಿ ಕ್ವಾರ್ಟರ್, ನಸ್ಪುರ್‌ನಲ್ಲಿ ವಾಸಿಸುತ್ತಿದ್ದಾರೆ. ವಿಜಯಕುಮಾರ್ ಮತ್ತು ಬಬಿತಾ ದಂಪತಿಗೆ ಮೂವರು ಮಕ್ಕಳಿದ್ದು, ಸೋನಿ ಹಿರಿಯ ಮಗಳು. ಎರಡನೇ ಮಗಳು ಪಾಲ್ಖ್ ಉತ್ತರ ಪ್ರದೇಶದ ಲಕ್ನೋದಲ್ಲಿ ಬಿಟೆಕ್ ಓದುತ್ತಿದ್ದಾಳೆ.
ಪುತ್ರ ಆದಿತ್ಯಕುಮಾರ್ ಹೈದರಾಬಾದ್ನಲ್ಲಿ 10ನೇ ತರಗತಿ ಓದುತ್ತಿದ್ದಾನೆ. ಸೋನಿ ಕಳೆದ ವರ್ಷ ದೆಹಲಿಯ ಮಹಾರಾಜ ಅಗ್ರಸೇನ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದರು. ಕಲೆಕ್ಟರ್ ಆಗುವ ಆಸೆಯನ್ನು ತಂದೆಗೆ ತಿಳಿಸಿದಳು. ತಂದೆಯ ಆಶಯವೂ ಅದೇ ಆಗಿದ್ದರಿಂದ ಮೂರು ತಿಂಗಳ ಹಿಂದೆ ರಾವ್ ಐಎಎಸ್ ಸ್ಟಡಿ ಸರ್ಕಲ್ ಕೋಚಿಂಗ್ ಸೆಂಟರ್ಗೆ ಸೇರಿಸಿದ್ದರು.
ಶನಿವಾರ ಏನು ನಡೆಯಿತು?
ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಶನಿವಾರ ಸಂಜೆ ಭಾರೀ ಮಳೆಯಾಗಿದೆ. ಇದರಿಂದಾಗಿ ಹಳೇ ರಾಜೇಂದ್ರನಗರದಲ್ಲಿರುವ ರಾವ್ ಐಎಎಸ್ ಸ್ಟಡಿ ಸರ್ಕಲ್ ಇರುವ ಕಟ್ಟಡದ ನೆಲಮಾಳಿಗೆಗೆ ಭಾರಿ ಪ್ರಮಾಣದ ನೀರು ಬರಲಾರಂಭಿಸಿತು. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಹೊರಬರಲು ಯತ್ನಿಸಿದ್ದಾರೆ. ಆದರೆ, ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ನೆಲಮಾಳಿಗೆಯಲ್ಲಿರುವ ಗ್ರಂಥಾಲಯದಲ್ಲಿ ಬಯೋಮೆಟ್ರಿಕ್ ಗೇಟ್ ಜಾಮ್ ಆಗಿದೆ. ಇದರಿಂದ ವಿದ್ಯಾರ್ಥಿಗಳು ಅಲ್ಲಿಯೇ ಸಿಲುಕಿಕೊಂಡರು. ನೀರು ಜಾಸ್ತಿಯಾಗುತ್ತಿದ್ದಂತೆ ವಿದ್ಯಾರ್ಥಿಗಳು ಮೇಜಿನ ಮೇಲೆ ನಿಂತು ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದರು. ನೋಡನೋಡುತ್ತಿದ್ದಂತೆ 10-12 ಅಡಿ ಆಳದ ನೀರು ಬಂದಿದೆ. ಸ್ಥಳೀಯ ಜನರು ವಿದ್ಯಾರ್ಥಿಗಳನ್ನು ರಕ್ಷಿಸಲು ನಡೆಸಿದ ಪ್ರಯತ್ನವು ಕೂಡ ಅಷ್ಟಾಗಿ ಫಲ ನೀಡಲಿಲ್ಲ. ರಾತ್ರಿ ಏಳು ಗಂಟೆಗೆ ಸ್ಥಳಕ್ಕಾಗಮಿಸಿದ ಎನ್‌ಡಿಆರ್‌ಎಫ್ ಸಿಬ್ಬಂದಿ ಮೋಟರ್ಗಳ ಮೂಲಕ ನೀರು ಹೊರತೆಗೆದರು ಮತ್ತು ಹಗ್ಗದ ಸಹಾಯದಿಂದ 14 ಜನರನ್ನು ರಕ್ಷಿಸಲಾಯಿತು. ರಕ್ಷಣಾ ಕಾರ್ಯಾಚರಣೆ ಮಧ್ಯರಾತ್ರಿಯವರೆಗೂ ನಡೆಯಿತು. ಆದರೆ, ಭಾನುವಾರ ಮುಂಜಾನೆ ಸೋನಿ ಮತ್ತು ಉತ್ತರ ಪ್ರದೇಶದ ಶ್ರೇಯಾ ಯಾದವ್ (22) ಮತ್ತು ಕೇರಳದ ನೆವಿನ್ ದಲಿವಾನ್ (29) ಮೃತದೇಹಗಳನ್ನು ಹೊರತೆಗೆಯಲಾಯಿತು.
ವಿಜಯಕುಮಾರ್-ಬಬಿತಾ ದಂಪತಿ ತಮ್ಮ ಎರಡನೇ ಮಗಳು ಪಾಲ್ಖ್ ಅವರನ್ನು ಕಾಲೇಜಿಗೆ ಬಿಡಲು ಶನಿವಾರ ರೈಲಿನಲ್ಲಿ ಲಖನೌಗೆ ತೆರಳಿದ್ದರು. ಮಗಳನ್ನು ಬಿಟ್ಟು ಮರಳಿ ತೆಲಂಗಾಣದ ಕಾಗಜನಗರ ತಲುಪಿದಾಗ ಸೋನಿ ಸಾವಿನ ಸುದ್ದಿ ತಿಳಿಯಿತು. ಮಗಳ ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಒಳಗಾದ ಪಾಲಕರು ತಕ್ಷಣ ನಾಗ್ಪುರಕ್ಕೆ ತೆರಳಿ ಅಲ್ಲಿಂದ ವಿಮಾನದಲ್ಲಿ ದೆಹಲಿಗೆ ತೆರಳಿದರು. ಆಸ್ಪತ್ರೆಯಲ್ಲಿ ಶವವಾಗಿ ಬಿದ್ದಿರುವ ಸೋನಿಯನ್ನು ನೋಡಿ ಆಘಾತದಿಂದ ಕುಸಿದುಬಿದ್ದರು. ಬಳಿಕ ಅಂತಿಮ ವಿಧಿವಿಧಾನಗಳಿಗಾಗಿ ಮೃತದೇಹವನ್ನು ಅವರ ಹುಟ್ಟೂರಾದ ಔರಂಗಾಬಾದ್‌ಗೆ ಕೊಂಡೊಯ್ಯಲಾಯಿತು. ವಿಜಯ್‌ಕುಮಾರ್ ಅವರು ತಮ್ಮ ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಇದೀಗ ಒಬ್ಬ ಮಗಳನ್ನು ಕಳೆದುಕೊಂಡು ಭಾರಿ ದುಃಖದಲ್ಲಿದ್ದಾರೆ.
ಸ್ಟಡಿ ಸರ್ಕಲ್ ಮಾಲೀಕ ಅಭಿಷೇಕ್ ಗುಪ್ತಾ ಅವರನ್ನು ರಾಜೇಂದ್ರನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳಪೆ ಒಳಚರಂಡಿ ವ್ಯವಸ್ಥೆಯಿಂದಾಗಿ ನೀರು ನೆಲಮಾಳಿಗೆಗೆ ಪ್ರವೇಶಿಸಿದೆ ಎಂದು ಗುಪ್ತಾ ಪೊಲೀಸ್ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ. ಈ ಘಟನೆಗೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಪ್ರತಿಕ್ರಿಯೆ ನೀಡಿದ್ದು, ನೆಲಮಾಳಿಗೆಯಲ್ಲಿ ಗ್ರಂಥಾಲಯ ನಡೆಸಲು ಸಂಸ್ಥೆಗೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮತ್ತು ರಾಜ್ಯ ಸಚಿವ ಅತಿಶಿ ಘಟನೆಯ ತನಿಖೆಗೆ ಆದೇಶ ಹೊರಡಿಸಿದ್ದಾರೆ. (ಏಜೆನ್ಸೀಸ್)