

ನವದೆಹಲಿ: ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಶನಿವಾರ ನಡೆದ ಮೊದಲ ಟಿ20 ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದೆ. ಈ ಪಂದ್ಯದಿಂದ ಭಾರತಕ್ಕೆ ಸಾಕಷ್ಟು ಪಾಸಿಟಿವ್ ಅಂಶಗಳು ದೊರೆತವು. ಅದೇನೆಂದರೆ, ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ (21 ಎಸೆತಗಳಲ್ಲಿ 40) ಮತ್ತು ಶುಭಮನ್ ಗಿಲ್ (16 ಎಸೆತಗಳಲ್ಲಿ 34) ರನ್ ಗಳಿಸಿದರು. ಒನ್ಡೌನ್ನಲ್ಲಿ ಕ್ರೀಸ್ಗೆ ಬಂದ ನಾಯಕ ಸೂರ್ಯಕುಮಾರ್ ಯಾದವ್ (26 ಎಸೆತಗಳಲ್ಲಿ 58) ನಿರ್ಣಾಯಕ ಇನ್ನಿಂಗ್ಸ್‌ನೊಂದಿಗೆ ತಂಡಕ್ಕೆ ಬೃಹತ್ ಸ್ಕೋರ್ ನೀಡಿದರು.
ವಿಕೆಟ್ ಕೀಪರ್ ರಿಷಬ್ ಪಂತ್ (33 ಎಸೆತಗಳಲ್ಲಿ 49) ಆ್ಯಂಕರ್ ಇನ್ನಿಂಗ್ಸ್ ಆಡುವ ಮೂಲಕ ಕೊನೆಯವರೆಗೂ ಕ್ರೀಸ್ನಲ್ಲಿ ಉಳಿದರು. ಇನ್ನೊಂದೆಡೆ ಬೌಲಿಂಗ್ನಲ್ಲಿ ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಹಾಗೂ ರಿಯಾನ್ ಪರಾಗ್ ಜೊತೆಗೂಡಿ ಲಂಕಾವನ್ನು ಮ್ಯಾಜಿಕ್ ಸ್ಪೆಲ್ ಮೂಲಕ ಕೆಡವಿ, ತಮ್ಮ ಬೌಲಿಂಗ್ ಸಾಮರ್ಥ್ಯ ಸಾಬೀತು ಮಾಡಿದರು.
ಆದರೆ, ಟೀಮ್ ಇಂಡಿಯಾದ ಅಮೋಘ ಗೆಲುವಿಗಿಂತ ಇನ್ನೆರಡು ವಿಷಯಗಳು ಹೈಲೈಟ್ ಆಗಿವೆ. ಅವುಗಳಲ್ಲಿ ಒಂದು ತಂಡದ ಆಟಗಾರ ರಿಂಕು ಸಿಂಗ್ ಬಗ್ಗೆ ಮತ್ತು ಇನ್ನೊಂದು ಬೆಂಚ್‌ನಲ್ಲಿರುವ ಆಟಗಾರ ಸಂಜು ಸ್ಯಾಮ್ಸನ್ ಬಗ್ಗೆ ಎಂಬುದು ಗಮನಾರ್ಹವಾಗಿದೆ. ಪ್ಲೇಯಿಂಗ್ ಇಲೆವೆನ್‌ನಲ್ಲಿ ಸಂಜು ಅವರನ್ನು ಸೇರಿಸಿಕೊಳ್ಳದಿರುವುದು ಚರ್ಚೆಯ ವಿಷಯವಾಗಿದೆ. ಇಷ್ಟು ವರ್ಷ ಅವರನ್ನು ಬೆಂಬಲಿಸುತ್ತಿದ್ದ ಗಂಭೀರ್, ಕೋಚ್ ಆದ ನಂತರ ಅವರಿಗೆ ಕೈ ಕೊಟ್ಟಿದ್ದು ವಿವಾದಕ್ಕೀಡಾಯಿತು. ಅದೇ ಸಮಯದಲ್ಲಿ, ರಿಂಕು ಅವರ ಗಂಭೀರ್ ನಡೆಸಿಕೊಳ್ಳುತ್ತಿರುವ ರೀತಿ ಟ್ರೋಲ್ ಆಗಿದೆ. ಪ್ರತಿಭಾವಂತರಾಗಿರುವ ರಿಂಕು ಅವರಿಗೆ ಗಂಭೀರ್ ಅನ್ಯಾಯ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್ ಫ್ರಾಂಚೈಸಿಗೆ ಮೆಂಟರ್ ಆಗಿ ಬಂದಿದ್ದ ಗಂಭೀರ್, ಎಲ್ಲ ಆಟಗಾರರಿಗೆ ಸೂಕ್ತ ಅವಕಾಶಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಿದರು. ಇದು ತಂಡವನ್ನು ಕಪ್ ಎತ್ತಿ ಹಿಡಿಯುವಂತೆ ಮಾಡಿತು. ಎಲ್ಲರನ್ನೂ ಒಂದೇ ರೀತಿ ನಡೆಸಿಕೊಂಡ ಗೌತಿ, ರಿಂಕು ಜೊತೆ ನಡೆದುಕೊಂಡ ರೀತಿ ವಿವಾದಕ್ಕೀಡಾಗಿದೆ. ಐಪಿಎಲ್‌ನಲ್ಲಿ ರಿಂಕುಗೆ ಸರಿಯಾದ ಅವಕಾಶ ಸಿಗಲಿಲ್ಲ. ಇದರಿಂದಾಗಿ ಅವರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಅವರು ಮೀಸಲು ಆಟಗಾರನಾಗಿ ಮೆಗಾಟೂರ್ನಮೆಂಟ್‌ಗೆ ಹೋಗಬೇಕಾಯಿತು. ಇದೀಗ ಲಂಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಬಲ-ಎಡ ಕಾಂಬಿನೇಷನ್ ನಿಂದಾಗಿ ಗೌತಿ ರಿಂಕು ಅವರನ್ನು ಬ್ಯಾಟಿಂಗ್ನಲ್ಲಿ ತಡೆದರು. ರಿಯಾನ್ ಪರಾಗ್ ಅವರನ್ನು ರಿಂಕುಗಿಂತ ಮೊದಲು ಕಳುಹಿಸಿದರು.
ಅಂತಿಮವಾಗಿ ಬ್ಯಾಟಿಂಗ್ಗೆ ಬಂದ ರಿಂಕುಗೆ ಕೇವಲ 1 ಎಸೆತ ಆಡುವ ಅವಕಾಶ ಸಿಕ್ಕಿತು. ಹೀಗಾಗಿ ನೆಟ್ಟಿಗರು ಗಂಭೀರ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ರಿಂಕು ಅವರಂತಹ ಪಿಂಚ್ ಹಿಟ್ಟರ್ ಅನ್ನು ಕಳುಹಿಸದೆ ಬಲ-ಎಡ ಕಾಂಬೋದೊಂದಿಗೆ ಸಮಯ ವ್ಯರ್ಥ ಮಾಡುವುದಕ್ಕೆ ಅರ್ಥವಿಲ್ಲ ಎಂದು ಕಿಡಿಕಾರುತ್ತಿದ್ದಾರೆ. ಪರಾಗ್ಗಾಗಿ ರಿಂಕುವನ್ನು ಬಲಿಕೊಡಬೇಡಿ ಎಂದು ನೆಟ್ಟಿಗರು ಗಂಭೀರ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ರೀತಿ ಅವಕಾಶಗಳಿಂದ ರಿಂಕು ವಂಚಿತರಾದರೆ ಅವರ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಿ, ಅವರ ಕೆರಿಯರ್ ಇನ್ನಷ್ಟು ಅಪಾಯಕ್ಕೆ ಸಿಲುಕುತ್ತದೆ ಎಂಬ ಕಾಮೆಂಟ್ಗಳು ಬರುತ್ತಿವೆ. ರಿಂಕು ಅವರ ವೃತ್ತಿಯೊಂದಿಗೆ ಆಟವಾಡಬೇಡಿ ಎಂದು ಗಂಭೀರ್ಗೆ ಕ್ರೀಡಾಭಿಮಾನಿಗಳು ಸಲಹೆ ನೀಡುತ್ತಿದ್ದಾರೆ. (ಏಜೆನ್ಸೀಸ್)