ಚೆನ್ನೈ: ಟಾಲಿವುಡ್ ಸೂಪರ್ ಸ್ಟಾರ್ ಸೂರ್ಯ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ತಮ್ಮ ಅದ್ಭುತ ನಟನೆಯ ಮೂಲಕ ತಮಿಳು, ತೆಲುಗು ಮತ್ತು ಕನ್ನಡದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ ಹೀರೋ ಓರಿಯೆಂಟೆಡ್ ಸಿನಿಮಾಗಳನ್ನು ಮಾತ್ರ ಮಾಡದೇ ಸೂರರೈ ಪೋಟ್ರು ಹಾಗೂ ಜೈಭೀಮ್ನಂತಹ ಸಾಮಾಜಿಕ ಸಂದೇಶವುಳ್ಳ ಸಿನಿಮಾಗಳನ್ನು ಮಾಡುವ ಮೂಲಕ ಸಿನಿ ರಸಿಕರ ಮನದಲ್ಲಿ ತಮ್ಮದೇಯಾದ ಸ್ಥಾನವನ್ನು ಪಡೆದಿದ್ದಾರೆ. ಸಿನಿಮಾದಿಂದಾಚೆಗೆ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಸೂರ್ಯ, ಎಷ್ಟೋ ಜನರ ಬಾಳಿನಲ್ಲಿ ನಿಜವಾದ ಹೀರೋ ಎನಿಸಿಕೊಂಡಿದ್ದಾರೆ.
ಸೂರ್ಯ ಅವರು ಜುಲೈ 23ರಂದು ತಮ್ಮ 49ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತು. ತಮಿಳು ಚಿತ್ರರಂಗದ ಸ್ಟಾರ್ ನಟರ ಸಾಲಿನಲ್ಲಿ ಸೂರ್ಯ ಮುಂಚೂಣಿಯಲ್ಲಿದ್ದಾರೆ. ಪ್ರಸ್ತುತ ಅವರ ಸಂಭಾವನೆಯು ಕೂಡ ಕೋಟಿಗಟ್ಟಲೆ ಇದೆ. ಸೂರ್ಯ ಕೇವಲ ತಮಿಳು ಭಾಷೆಗೆ ಮಾತ್ರ ಸೀಮಿತವಾಗದೇ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ. ಭಾಷೆಯ ಬೇಧವಿಲ್ಲದೆ ಸೂರ್ಯ ಅವರ ಮೇಲಿನ ಕ್ರೇಜ್ ಎಲ್ಲ ಭಾಷೆಗಳಲ್ಲೂ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ.
ಪ್ರಸ್ತುತ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸೂರ್ಯ ಅವರ ಮೊದಲ ಸಂಬಳ ಎಷ್ಟು ಅಂತಾ ಗೊತ್ತಾದ್ರೆ ನಿಮಗೆಲ್ಲ ಆಶ್ವರ್ಯವಾಗುತ್ತದೆ. ಆರಂಭದಲ್ಲಿ ಸೂರ್ಯ ಅವರ ಸಂಬಂಳ 736 ರೂಪಾಯಿಗಳು. ಆದರೆ, ಈಗ ಅವರ ಆಸ್ತಿ ಮೌಲ್ಯ 350 ಕೋಟಿ ರೂಪಾಯಿಗಳು ಎಂಬುದು ಗಮನಾರ್ಹ ಸಂಗತಿಯಾಗಿದೆ. ಸದ್ಯ ಸೂರ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದು, ನಿರೀಕ್ಷೆಗೂ ಮೀರಿದ ಬಜೆಟ್‌ನಲ್ಲಿ ಕಂಗುವಾ ಸಿನಿಮಾ ತಯಾರಾಗುತ್ತಿದೆ. ಸೂರ್ಯ ಅವರ ತಂದೆ ಶಿವಕುಮಾರ್ ಜನಪ್ರಿಯ ನಟರಾಗಿದ್ದರೂ ಸಹ, ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ಸೂರ್ಯ ಅವರು ತಮ್ಮ ತಂದೆಯ ಇಮೇಜ್‌ಗಿಂತ ಭಿನ್ನವಾಗಿ ಏನನ್ನಾದರೂ ಸಾಧಿಸಲು ಬಯಸಿದ್ದರು.
ಆರಂಭದಲ್ಲಿ ಸಿನಿಮಾವನ್ನು ಬಿಟ್ಟು ಗಾರ್ಮೆಂಟ್ಸ್ ವ್ಯಾಪಾರಕ್ಕೆ ಇಳಿದ ಸೂರ್ಯ, ಮೊದಲು 736 ರೂಪಾಯಿಗೆ ಬಟ್ಟೆ ಕಾರ್ಖಾನೆಗೆ ಕೆಲಸಕ್ಕೆ ಸೇರಿಕೊಂಡರು. ತಾನು ನಟನೊಬ್ಬನ ಮಗ ಎಂಬ ಗುರುತನ್ನು ಮರೆಮಾಚಿ, 6 ತಿಂಗಳ ಕಾಲ ಗಾರ್ಮೆಂಟ್ ಕಾರ್ಖಾನೆಯಲ್ಲಿ ದುಡಿದರು. ಆರಂಭದಲ್ಲಿ ವಸಂತ್ ಅವರ ‘ಆಶೈ’ (1995) ಚಿತ್ರದಲ್ಲಿ ನಾಯಕನ ಪಾತ್ರ ಆಫರ್ ಅನ್ನು ಸೂರ್ಯಗೆ ನೀಡಲಾಯಿತು. ಆದರೆ, ಸೂರ್ಯ ಅವರು ತನಗೆ ನಟನೆಯ ಮೇಲೆ ಆಸಕ್ತಿ ಇಲ್ಲ ಎಂದು ಹೇಳಿ ಆಫರ್ ತಿರಸ್ಕರಿಸಿದ್ದರು. ಆದರೂ, ಕೆಲವೇ ತಿಂಗಳಲ್ಲಿ ಬಣ್ಣದ ಜಗತ್ತು ಅವರನ್ನು ಕೈಬೀಸಿ ಕರೆಯಿತು.
1997ರಲ್ಲಿ ವಸಂತ್ ನಿರ್ದೇಶನದ ಮತ್ತು ಮಣಿರತ್ನಂ ನಿರ್ಮಾಣದ ‘ನೆರುಕ್ಕು ನೇರ್’ ಚಿತ್ರದ ಮೂಲಕ ಸೂರ್ಯ ಪಾದರ್ಪಣೆ ಮಾಡಿದರು. ನಂತರ ಅವರು 2001ರಲ್ಲಿ ಸಿದ್ದಿಕ್ ನಿರ್ದೇಶನದ ‘ಫ್ರೆಂಡ್ಸ್’ ಮತ್ತು ಬಾಲಾ ಅವರ ‘ನಂದಾ’ ಸಿನಿಮಾದಲ್ಲಿ ನಟಿಸಿದರು. ಇದಕ್ಕಾಗಿ ಅವರು ಅತ್ಯುತ್ತಮ ನಟನಿಗಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಪಡೆದರು. 2003ರಲ್ಲಿ ಸೂರ್ಯ ಅವರು ಪೋಲೀಸ್ ಅಧಿಕಾರಿಯ ಜೀವನದ ಕುರಿತಾದ ‘ಕಾಕ ಕಾಕ’ ಚಲನಚಿತ್ರವನ್ನು ಮಾಡಿದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡಿತು. ಬಳಿಕ ಅವರು ‘ಪಿತಾಮಗನ್’ ಸಿನಿಮಾದಲ್ಲಿ ವಿಕ್ರಮ್ ಜತೆ ಪೋಷಕ ಪಾತ್ರವನ್ನು ಮಾಡಿದರು. ಈ ಸಿನಿಮಾಗಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದರು.
2005ರಲ್ಲಿ ಸೂರ್ಯ ಅವರು ಎ.ಆರ್. ಮುರುಗದಾಸ್ ನಿರ್ದೇಶನದ ‘ಗಜನಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಅವರು ಶಾರ್ಟ್ ಟರ್ಮ್ ಮೆಮೊರಿ ಲಾಸ್‌ನಿಂದ ಬಳಲುತ್ತಿರುವ ರೋಗಿಯ ಪಾತ್ರವನ್ನು ನಿರ್ವಹಿಸಿದರು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು ಮತ್ತು ಸೂರ್ಯ ಅವರ ಸಿನಿಮಾ ಜರ್ನಿಯಲ್ಲಿ ಮಹತ್ವದ ತಿರುವು ನೀಡಿ, ಸ್ಟಾರ್ ಪಟ್ಟವನ್ನು ತಂಡದುಕೊಟ್ಟಿತು. ಈ ಸಿನಿಮಾವನ್ನು ಬಾಲಿವುಡ್‌ನಲ್ಲಿ ರಿಮೇಕ್ ಮಾಡಲಾಗಿದ್ದು, ಅಮೀರ್ ಖಾನ್ ನಾಯಕನಾಗಿ ನಟಿಸಿದ್ದಾರೆ.
2008ರಲ್ಲಿ ಸೂರ್ಯ ಅವರು ‘ವಾರಣಂ ಆಯಿರಂ’ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ವಿಜಯ್ ಪ್ರಶಸ್ತಿಯನ್ನು ಗೆದ್ದರು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ರಕ್ತ ಚರಿತ್ರ’ ಚಿತ್ರದ ಮೂಲಕ 2010ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದೇ ವರ್ಷ ಹರಿ ನಿರ್ದೇಶನದ ‘ಸಿಂಗಂ’ ಚಿತ್ರದಲ್ಲಿ ಸೂರ್ಯ ನಾಯಕನಾಗಿ ನಟಿಸಿದರು. ಈ ಸಿನಿಮಾ ಆಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತು. ಅಲ್ಲದೆ, ಈ ಸಿನಿಮಾವನ್ನು ಬಾಲಿವುಡ್‌ನಲ್ಲಿ ರೋಹಿತ್ ಶೆಟ್ಟಿ ಅವರು ನಿರ್ದೇಶಿಸಿದರು ಮತ್ತು ಅಜಯ್ ದೇವಗನ್ ನಾಯಕನಾಗಿ ನಟಿಸಿದರು.
2012ರ ಜನವರಿಯಲ್ಲಿ ಸ್ಟಾರ್ ವಿಜಯ್‌ನಲ್ಲಿ ಮೂಡಿಬಂದ ಹೊಸ ಗೇಮ್ ಶೋನ ಅಧಿಕೃತ ನಿರೂಪಕರಾಗಿ ಸೂರ್ಯ ಅವರನ್ನು ಹೆಸರಿಸಲಾಯಿತು. ತಮಿಳು ವರ್ಷನ್ ಕೋಟ್ಯಧಿಪತಿ, ನೀಂಗಲುಂ ವೆಲ್ಲಾಲಂ ಒರು ಕೊಡಿ ರಿಯಾಲಿಟಿ ಶೋ ನಿರೂಪಕರಾದರು. ಸೂರ್ಯ ಅವರು ಶಿವಕುಮಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀಲಂಕಾದ ತಮಿಳು ಮಕ್ಕಳ ಶಿಕ್ಷಣಕ್ಕೆ ತನ್ನ ತಂದೆ ಮತ್ತು ಸಹೋದರನೊಂದಿಗೆ ಸಹಾಯವನ್ನು ಸಹ ನೀಡಿದ್ದಾರೆ. ಅವರು ಭಾರತದಲ್ಲಿ ಹುಲಿಗಳ ರಕ್ಷಣೆ ಮತ್ತು ಸಂರಕ್ಷಣೆಗೆ ಸಹಾಯ ಮಾಡುವ ‘ಸೇವ್ ದಿ ಟೈಗರ್ಸ್’ ಅಭಿಯಾನದಂತಹ ಇತರ ಮಾನವೀಯ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಸೂರ್ಯ ನಟನೆಯ ಕಂಗುವಾ ಸಿನಿಮಾ ಅಕ್ಟೋಬರ್ 10ಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದೆ. (ಏಜೆನ್ಸೀಸ್)
ಈ ಫೋಟೋದಲ್ಲಿರುವ ಇನ್ನೊಂದು ಕುದುರೆಯನ್ನು ಪತ್ತೆಹಚ್ಚಿದ್ರೆ ನಿಮ್ಮಂಥ ಬುದ್ಧಿವಂತರು ಯಾರು ಇಲ್ಲ!
7 ಕ್ಯಾಪ್ಟನ್ಗಳಿಂದ ತಿರಸ್ಕಾರ… ಟೀಮ್ ಇಂಡಿಯಾದಲ್ಲೇ ಈತನಷ್ಟು ದುರಾದೃಷ್ಟ ಆಟಗಾರ ಮತ್ತೊಬ್ಬನಿಲ್ಲ!
ಎರಡೂ ಕೈಗಳಿಂದ ಬೌಲಿಂಗ್ ಮಾಡಿ ಕನ್ಫ್ಯೂಸ್ ಮಾಡಿದ ಲಂಕಾ ಸ್ಪಿನ್ನರ್! ಐಸಿಸಿ ನಿಯಮ ಏನು ಹೇಳುತ್ತೆ?