

ನವದೆಹಲಿ: ಕ್ರಿಕೆಟ್ನಲ್ಲಿ ಉನ್ನತ ಸ್ಥಾನಕ್ಕೇರಲು ಪ್ರತಿಭೆಯೊಂದೇ ಸಾಲದು. ಪ್ರತಿಭೆಯ ಜತೆಗೆ ಅದೃಷ್ಟವೂ ಬೇಕು ಎಂಬುದು ಹಲವರ ಅಭಿಪ್ರಾಯ. ನಿಮಗೆ ಈ ಆಟಗಾರನ ಬಗ್ಗೆ ನಿಮಗೆ ತಿಳಿದಿದ್ದರೆ, ಈ ಮಾತು ನಿಜ ಎಂದು ನೀವೇ ಒಪ್ಪುತ್ತೀರಿ. ಆತ ಪ್ರಸ್ತುತ ಟೀಮ್ ಇಂಡಿಯಾದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಬ್ಯಾಟಿಂಗ್ ಮಾತ್ರವಲ್ಲ, ವಿಕೆಟ್ ಕೀಪಿಂಗ್ ಸಾಮರ್ಥ್ಯವೂ ಇದೆ. ಕಳೆದ ಕೆಲವು ಸೀಸನ್ಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಂಡವೊಂದರ ನಾಯಕನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಅವರು ಯಾವಾಗಲೂ ಕೂಲ್ ಆಗಿಯೇ ಇರುತ್ತಾರೆ ಮತ್ತು ಇತರ ಆಟಗಾರರ ಮೇಲೆ ಒತ್ತಡ ಹೇರದಂತೆ ನೋಡಿಕೊಳ್ಳುತ್ತಾರೆ. ಆ ಆಟಗಾರ ಸಹಜ ಬ್ಯಾಟಿಂಗ್ ಅನ್ನು ಬದಿಗಿಟ್ಟು ತಂಡದ ಅಗತ್ಯಕ್ಕೆ ತಕ್ಕಂತೆ ಆಡುತ್ತಾರೆ. ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಸಿಕ್ಕಾಗಲೆಲ್ಲ ರನ್ಗಳ ಮಹಾಪೂರವನ್ನೇ ಹರಿಸುತ್ತಾರೆ. ಆ ಪ್ರತಿಭಾವಂತ ಆಟಗಾರನಿಗೆ ಮತ್ತೊಮ್ಮೆ ಅನ್ಯಾಯವಾಗಿದೆ. ತಂಡದಲ್ಲಿರಬೇಕು ಎಂದು ಕೋಚ್ ಹೇಳಿದ್ದಾರೆ. ಆದರೆ, ಅವರು ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯದೇ ಇರುವುದು ವಿಷಾದನೀಯ ಸಂಗತಿ.
ನಾವು ಇಷ್ಟೊತ್ತು ಪೀಠಿಕೆ ಹಾಕಿದ ಆ ದುರಾದೃಷ್ಟ ಆಟಗಾರ ಬೇರೆ ಯಾರೂ ಅಲ್ಲ ಅವರೇ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್. ನಿನ್ನೆ (ಜುಲೈ 27) ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸಂಜುಗೆ ಸ್ಥಾನ ಸಿಗಲಿಲ್ಲ.
ಇಷ್ಟು ವರ್ಷ ಸಂಜು ಅವರಂಥ ಆಟಗಾರ ಮತ್ತೊಬ್ಬರಿಲ್ಲ, ಅವರೊಬ್ಬ ಟಾಪ್ ಬ್ಯಾಟ್ಸ್ಮನ್ ಎಂದು ಹೇಳುತ್ತಿದ್ದ ಗಂಭೀರ್ ಕೂಡ ಲಂಕಾ ವಿರುದ್ಧದ ಮೊದಲ ಟಿ20ಯಲ್ಲಿ ಸಂಜುಗೆ ಸ್ಥಾನ ನೀಡಲಿಲ್ಲ. ಹಲವು ವರ್ಷಗಳಿಂದ ಅವಕಾಶಗಳಿಗಾಗಿ ಕಾಯುತ್ತಿರುವ ಸಂಜು ಅವರನ್ನು ಬಿಟ್ಟು, ಇತ್ತೀಚೆಗಷ್ಟೇ ತಂಡಕ್ಕೆ ಪಾದರ್ಪಣೆ ಮಾಡಿದ ರಿಯಾನ್ ಪರಾಗ್ ಅವರನ್ನು ತಂಡಕ್ಕೆ ತೆಗೆದುಕೊಂಡಿದ್ದಾರೆ. ಈ ನಿರ್ಧಾರದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಇದು ಅತಿರೇಕ ಎಂದು ನೆಟಿಜನ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಸಂಜು ಅವರನ್ನು ಕಣಕ್ಕಿಳಿಸದೇ ಇರುವುದು ಇದೇ ಮೊದಲೇನಲ್ಲ. ಸಂಜು ಅವರು ಇದುವರೆಗೂ ಕೇವಲ 28 ಪಂದ್ಯಗಳಲ್ಲಿ ಆಡುವ ಹನ್ನೊಂದರಲ್ಲಿ ಸೇರ್ಪಡೆಗೊಂಡಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಏಳು ನಾಯಕರು ಟಿ20 ತಂಡವನ್ನು ಮುನ್ನಡೆಸಿದರು. ಒಬ್ಬರು ಕೂಡ ಸಂಜು ಪರವಾಗಿ ನಿಲ್ಲಲಿಲ್ಲ. ಪ್ರಸ್ತುತ ಸೂರ್ಯಕುಮಾರ್ ನಾಯಕತ್ವ ಸೇರಿದಂತೆ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ರಿಷಬ್ ಪಂತ್, ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿಯೂ ಸಂಜು ಅವರನ್ನು ತಂಡದಿಂದ ಕೈಬಿಡಲಾಗಿತ್ತು ಎಂಬುದು ಗಮನಾರ್ಹ. ಇದರಿಂದಾಗಿ ಸ್ಯಾಮ್ಸನ್ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ.
ಸಂಜು ಅವರ ಪ್ರತಿಭೆಯೆಲ್ಲ ವ್ಯರ್ಥವಾಗುತ್ತಿದೆ. ಸಂಜು ಕರ್ಣನಂತಾಗುತ್ತಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಕ್ರಿಕೆಟ್ನಲ್ಲಿ ಸಂಜುಗಿಂತ ದೊಡ್ಡ ದುರಾದೃಷ್ಟವಂತರು ಯಾರೂ ಇಲ್ಲ ಎಂದು ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬದಲಾದರೂ ಸಂಜು ಅವರ ಹಣೆಬರಹ ಬದಲಾಗಿಲ್ಲ ಎಂದು ಹೇಳುತ್ತಿದ್ದಾರೆ. ಅಂದಹಾಗೆ ಸಂಜು ಸ್ಯಾಮ್ಸನ್ ಭಾರತ ತಂಡಕ್ಕೆ ಸೇರ್ಪಡೆಯಾಗದಿರುವ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)